ಹಡಗಿನಿಂದ 300ಕ್ಕೂ ಅಧಿಕ ಅಮೆರಿಕನ್ನರ ತೆರವು: 14 ಮಂದಿಯಲ್ಲಿ ಸೋಂಕು ಪತ್ತೆ

Update: 2020-02-17 15:24 GMT

ವಾಶಿಂಗ್ಟನ್, ಫೆ. 17: ಜಪಾನ್‌ನ ಯೊಕೊಹಾಮದಲ್ಲಿ ದಿಗ್ಬಂಧನದಲ್ಲಿರುವ ‘ಡೈಮಂಡ್ ಪ್ರಿನ್ಸೆಸ್’ ಪ್ರವಾಸಿ ಹಡಗಿನಿಂದ 300ಕ್ಕೂ ಅಧಿಕ ಅಮೆರಿಕ ಪ್ರಜೆಗಳನ್ನು ವಿಶೇಷ ವಿಮಾನವೊಂದರಲ್ಲಿ ತೆರವುಗೊಳಿಸಲಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಸೋಮವಾರ ತಿಳಿಸಿದೆ. ಈ ಪೈಕಿ 14 ಮಂದಿಯಲ್ಲಿ ನೂತನ-ಕೊರೋನವೈರಸ್ ಕಾಯಿಲೆ ಇರುವುದು ಪತ್ತೆಯಾಗಿದೆ.

ಅಮೆರಿಕ ಪ್ರಜೆಗಳ ಪೈಕಿ 14 ಮಂದಿಯಲ್ಲಿ ಕೆಲ ದಿನಗಳ ಹಿಂದೆ ಕೊರೋನವೈರಸ್ ಕಾಯಿಲೆ ಪತ್ತೆಯಾಗಿದೆ ಎಂದು ಜಪಾನ್ ಅಧಿಕಾರಿಗಳು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು ಎಂದು ಹೇಳಿಕೆಯೊಂದರಲ್ಲಿ ವಿದೇಶಾಂಗ ಇಲಾಖೆ ತಿಳಿಸಿದೆ.

ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿದ ಬಳಿಕ, ಸೋಂಕು ಪೀಡಿತರನ್ನೂ ವಾಪಸ್ ಕರೆತರಲು ನಿರ್ಧರಿಸಲಾಯಿತು ಎಂದು ಅದು ಹೇಳಿದೆ. ಆದರೆ, ಸೋಂಕು ಪೀಡಿತರನ್ನು ಇತರರಿಂದ ಪ್ರತ್ಯೇಕಿಸಲಾಗಿದೆ.

‘‘ಸೋಂಕು ಪೀಡಿತರನ್ನು ಚಾಲ್ತಿಯಲ್ಲಿರುವ ಮಾನದಂಡಗಳಿಗೆ ಅನುಸಾರವಾಗಿ ವಿಮಾನದಲ್ಲಿ ವಿಶೇಷವಾಗಿ ನಿರ್ಮಿಸಲಾಗಿರುವ ಕೋಣೆಗಳಿಗೆ ಕ್ಷಿಪ್ರವಾಗಿ ಮತ್ತು ಸುರಕ್ಷಿತವಾಗಿ ಸಾಗಿಸಲಾಗಿದೆ’’ ಎಂದಿದೆ.

ಮೊದಲ ವಿಮಾನವು ಕ್ಯಾಲಿಫೋರ್ನಿಯದಲ್ಲಿರುವ ವಾಯುಪಡೆ ನೆಲೆಯಲ್ಲಿ ಇಳಿಯಲಿದೆ ಹಾಗೂ ಅಲ್ಲಿ ಎಲ್ಲ ಪ್ರಯಾಣಿಕರನ್ನು 14 ದಿನಗಳ ಕಾಲ ದಿಗ್ಬಂಧನದಲ್ಲಿಡಲಾಗುವುದು. ಅದೇ ವೇಳೆ, ಇನ್ನೊಂದು ವಿಮಾನವು ಟೆಕ್ಸಾಸ್‌ನ ಸ್ಯಾನ್ ಆಂಟೋನಿಯೊದಲ್ಲಿರುವ ಇನ್ನೊಂದು ವಾಯುನೆಲೆಯಲ್ಲಿ ಇಳಿಯಲಿದೆ.

ಕೊರೋನವೈರಸ್‌ನ ಆಡುಂಬೊಲವಾಗಿರುವ ಚೀನಾದ ವುಹಾನ್ ನಗರದಿಂದ ಈಗಾಗಲೇ 600ಕ್ಕೂ ಅಧಿಕ ಅಮೆರಿಕನ್ನರನ್ನು ತೆರವುಗೊಳಿಸಲಾಗಿದ್ದು, ಅವರು ಈಗಲೂ ದಿಗ್ಬಂಧನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News