ಹೆಚ್1ಎನ್1 ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಿ: ಜಿ.ಜಗದೀಶ್

Update: 2020-02-17 16:01 GMT

ಉಡುಪಿ, ಫೆ.17: ಜಿಲ್ಲೆಯಲ್ಲಿ ಹೆಚ್1ಎನ್1 ರೋಗದಿಂದ ಮರಣ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರೋಗದ ಲಕ್ಷಣಗಳು, ಹರಡುವಿಕೆ ಮತ್ತು ತಡೆಗಟ್ಟುವ ವಿಧಾನಗಳ ಬಗ್ಗೆ ಸಾರ್ವಜನಿಕರಿಗೆ ವ್ಯಾಪಕ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಅಧಿಕಾರಿ ಗಳಿಗೆ ಸೂಚಿಸಿದ್ದಾರೆ.

ಸೋಮವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಸರ್ವೇಕ್ಷಣಾ ಘಟಕದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಜಿಲ್ಲೆಯಲ್ಲಿ 2019ರಲ್ಲಿ 424 ಹೆಚ್1ಎನ್1 ಪ್ರಕರಣಗಳು ಕಂಡುಬಂದಿದ್ದು, ಅದರಲ್ಲಿ 10 ಜನರು ಮೃತಪಟ್ಟಿದ್ದಾರೆ. 2020ನೇ ಸಾಲಿನಲ್ಲಿ ಫೆಬ್ರವರಿವರೆಗೆ 55 ಪ್ರಕರಣಗಳು ದಾಖಲಾಗಿದ್ದು, ಇದುವರೆಗೂ ಯಾರೂ ಸಾವನ್ನಪ್ಪಿಲ್ಲ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ ಸಭೆಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಹೆಚ್1ಎನ್1 ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಜನರಲ್ಲಿ ಈ ರೋಗದ ಬಗ್ಗೆ ಅರಿವಿನ ಕೊರತೆ ಇದ್ದು, ಈ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸ ಬೇಕು ಎಂದು ಸೂಚನೆಗಳನ್ನು ನೀಡಿದರು.

ಉಡುಪಿ ಜಿಲ್ಲೆಯಲ್ಲಿ ಜಪಾನೀಸ್ ಎನ್ಸೆಪಲೈಟಿಸ್ ರೋಗದ 5 ಪ್ರಕರಣಗಳು ಕಂಡುಬಂದಿದ್ದು, ಇದರಲ್ಲಿ ಒಂದು ಸಾವು ದಾಖಲಾಗಿದೆ. ಚಿಕುನ್‌ಗುನ್ಯದ 7 ಪ್ರಕರಣಗಳು ಕಂಡುಬಂದಿದ್ದು, ಇದರಲ್ಲಿ 4 ಜನರಲ್ಲಿ ರೋಗ ಲಕ್ಷಣಗಳಿ ರುವುದು ಧೃಢಪಟ್ಟಿದೆ. ಹಿಂದಿನ ಸಾಲಿಗೆ ಹೋಲಿಸಿ ದಾಗ ಈ ಸಾಲಿನಲ್ಲಿ ಮಲೇರಿಯಾ ರೋಗದ ಪ್ರಕರಣಗಳು ಕಮ್ಮಿ ಇವೆ. ಡೆಂಗ್ ಪ್ರಕರಣಗಳು ರಾಜ್ಯಾದ್ಯಂತ ಹೆಚ್ಚಿದ್ದು, ಉಡುಪಿ ಜಿಲ್ಲೆಯಲ್ಲಿ ಈ ಸಾಲಿನಲ್ಲಿ ಒಟ್ಟು 25 ಪ್ರಕರಣಗಳು ದಾಖಲಾಗಿವೆ. ಈ ಎಲ್ಲಾ ರೋಗಗಳು ಸೊಳ್ಳೆಯಿಂದ ಹರಡುವುದರಿಂದ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಮಾಡಿ, ರೋಗ ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಕೀಟ ಜನ್ಯ ರೋಗ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್ ತಿಳಿಸಿದರು.

ಉಡುಪಿ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಹಾಳಾಗಿರುವ ಕಡೆಗಳಲ್ಲಿ ಸೊಳ್ಳೆಗಳ ಉತ್ಪತ್ತಿಯಾಗಿ ರೋಗಗಳು ಹರಡದಂತೆ ಎಚ್ಚರಿಕೆ ವಹಿಸುವಂತೆ ಡಿಸಿ ಸೂಚಿಸಿದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು ಮಂಗನ ಕಾಯಿಲೆ ಬಗ್ಗೆ ಮಾಹಿತಿ ನೀಡಿ, ಈ ಕಾಯಿಲೆಯು ಮಂಗನಿಂದ ಮನುಷ್ಯರಿಗೆ ಉಣ್ಣಿಯ ಮೂಲಕ ಹರಡುತ್ತದೆ. ಅರಣ್ಯ ಪ್ರದೇಶದಲ್ಲಿ ವಾಸಿಸುವ ಮತ್ತು ಕೆಲಸ ಕಾರ್ಯನಿಮಿತ್ತ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡುವ ಜನರಿಗೆ ಉಣ್ಣಿ ಕಚ್ಚಿದಾಗ ವೈರಸ್‌ಗಳು ಮನುಷ್ಯರ ದೇಹದೊಳಗೆ ಪ್ರವೇಶಿಸುತ್ತವೆ. ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಮಂಗನ ಕಾಯಿಲೆಯ ಎರಡು ಪ್ರಕರಣಗಳು ಕಂಡು ಬಂದಿದ್ದು, ಈ ಬಾರಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಮಂಗನ ಕಾಯಿಲೆ ಯಿಂದ ಬಳಲುವ ವಿವಿಧ ಜಿಲ್ಲೆಗಳ 8ಮಂದಿ ಮಣಿಪಾಲದ ಕೆಎಂಸಿಗೆ ದಾಖಲಾಗಿದ್ದು, ಇದರಲ್ಲಿ ಒಬ್ಬರ ಸಾವು ಸಂವಿಸಿದೆ. ಜಿಲ್ಲೆಯ ಮಂಗಗಳಲ್ಲಿ ಈ ಬಾರಿ ರೋಗದ ಲಕ್ಷಣಗಳು ಕಂಡುಬಂದಿಲ್ಲ ಎಂದರು.

ಜಿಲ್ಲೆಯಲ್ಲಿ ಖಾಸಗಿ ಮತ್ತು ಸರಕಾರಿ ಮೂಲಗಳಿಂದ ಬರುವ ನೀರಿನ ವಿಶ್ಲೇಷಣೆ ನಡೆಸಿದ್ದು, ಅಸುರಕ್ಷಿತ ನೀರನ್ನು ಕ್ಲೋರಿನ್ ಹಾಕುವ ಮೂಲಕ ಶುದ್ದೀಕರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕೊರೋನಾ ರೋಗದ ಯಾವುದೇ ಪ್ರಕರಣ ಗಳು ಇಲ್ಲ. ಚೀನಾದಿಂದ ಪ್ರವಾಸ ಬಂದ ಮೂವರೂ ಸ್ವಯಂಪ್ರೇರಿತರಾಗಿ ಜಿಲ್ಲಾಸ್ಪತ್ರೆಯಲ್ಲಿ ಪರೀಕ್ಷೆಗೊಳಗಾಗಿದ್ದು, ಅವರಲ್ಲಿ ಕೊರೋನಾ ಸೋಂಕು ಇಲ್ಲವೆಂದು ಧೃಢಪಟ್ಟಿದೆ ಎಂದು ಡಾ. ವಾಸುದೇವ ಉಪಾಧ್ಯಾಯ ತಿಳಿಸಿದರು.

ಜಿಲ್ಲೆಯಲ್ಲಿ ನಾಯಿ ಕಡಿತ ಹಾಗೂ ಹಾವು ಕಡಿತ ಲಸಿಕೆ ಸೇರಿದಂತೆ ಅಗತ್ಯ ಔಷಧ ಹಾಗೂ ಲಸಿಕೆಗಳ ದಾಸ್ತಾನು ಇದೆ ಎಂದು ಡಾ.ವಾಸುದೇವ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಸರ್ಜನ್ ಡಾ. ಮಧುಸೂಧನ್ ನಾಯಕ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಆರ್. ಶೇಷಪ್ಪ, ಡಿಡಿಪಿಐ ಶೇಷಶಯನ ಕಾರಿಂಜ, ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರತ್ನ, ಪಶುಸಂಗೋಪನೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿ ಗಳು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News