ಮಣ್ಣಿನಡಿ ಅಕ್ರಮವಾಗಿ ಹೂತಿಟ್ಟ 87 ಮರದ ದಿಮ್ಮಿಗಳು ವಶ

Update: 2020-02-17 18:00 GMT

ಹೆಬ್ರಿ, ಫೆ.17: ಕಾರ್ಕಳ ತಾಲೂಕು ಪಂಚಾಯತ್ ಬಿಜೆಪಿ ಸದಸ್ಯ ಅಮೃತ್ ಕುಮಾರ್ ಶೆಟ್ಟಿ ಎಂಬವರ ಬೇಳಂಜೆ ಗ್ರಾಮದ ಕೊಪ್ಪರಗುಂಡಿ ಎಂಬಲ್ಲಿರುವ ಮನೆಯ ತೋಟದ ಮಣ್ಣಿನ ಅಡಿಯಲ್ಲಿ ಹೂತಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಮರದ ದಿಮ್ಮಿಗಳನ್ನು ಹೆಬ್ರಿ ವಲಯ ಅರಣ್ಯಾಧಿಕಾರಿ ಮುನಿರಾಜ್ ನೇತೃತ್ವದ ತಂಡ ವಶಪಡಿಸಿಕೊಂಡಿದೆ.

ಖಚಿತ ಮಾಹಿತಿಯಂತೆ ರವಿವಾರ ಕಾರ್ಯಾಚರಣೆ ನಡೆಸಿದ ಅರಣ್ಯಾಧಿಕಾರಿಗಳ ತಂಡ, ಮಣ್ಣಿನ ಅಡಿಯಲ್ಲಿ ಹೂತಿಟ್ಟಿದ್ದ ಮರದ ದಿಮ್ಮಿಗಳನ್ನು ಜೆಸಿಬಿ ಮೂಲಕ ಹೊರಗೆ ತೆಗೆಸಲಾಯಿತು. ಇಡೀ ದಿನ ನಡೆಸಿದ ಕಾರ್ಯಾಚರಣೆಯಲ್ಲಿ ಜೆಸಿಬಿ ಮೂಲಕ ಅಗೆದಷ್ಟು ಮರದ ದಿಮ್ಮಿಗಳು ದೊರೆಯುತ್ತಿದ್ದುದರಿಂದ ಸೋಮವಾರ ಕೂಡ ಕಾರ್ಯಾಚರಣೆಯನ್ನು ಮುಂದುವರಿಸಲಾಗಿತ್ತು.

ಈ ಕಾರ್ಯಾಚರಣೆಯಿಂದ 4.506 ಘನ ಮೀಟರ್ ಕಿರಾಲು ಬೋಗಿ, ಮ್ಯಾಂಜಿಯಂ ಜಾತಿಯ ಮರದ 43 ದಿಮ್ಮಿಗಳು ಮತ್ತು ಕಿರಾಲುಬೋಗಿ, ಮ್ಯಾಂಜಿಯಂ, ಅಕೇಶಿಯ ಜಾತಿಯ ಮರದ 44 ಎಳಗಳು ಸೇರಿದಂತೆ ಒಟ್ಟು 87 ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ತೋಟದ ಮಾಲಕರಾದ ತಾಪಂ ಸದಸ್ಯ ಅಮೃತ್ ಕುಮಾರ್ ಶೆಟ್ಟಿ ಹಾಗೂ ಅವರ ಸಹೋದರ ಅಶೋಕ್ ಕುಮಾರ್ ಶೆಟ್ಟಿ ವಿರುದ್ಧ ಹೆಬ್ರಿ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕುಂದಾಪುರ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ. ವಶಪಡಿಸಿಕೊಂಡ ನಾಟಗಳನ್ನು ಸೀತಾ ನದಿ ನಾಟ ಸಂಗ್ರಹಾಲಯಕ್ಕೆ ಸಾಗಾಟ ಮಾಡಲಾಗಿದೆ. ಪ್ರಕರಣದ ತನಿಖೆ ಮುಂದುವರೆಸಿದ್ದು, ಆರೋಪಿಗಳ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಈ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಾಪಂ ಸದಸ್ಯ ಅಮೃತ್ ಕುಮಾರ್ ಶೆಟ್ಟಿ, ನಮ್ಮ ತಂದೆಯ ಜಾಗದಲ್ಲಿದ್ದ ಸತ್ತು ಹೋದ ಮರಗಳನ್ನು ಮನೆಯಲ್ಲಿ ಯಕ್ಷಗಾನ ನಡೆಸಬೇಕಾದ ಹಿನ್ನಲೆಯಲ್ಲಿ ಕಡಿಯಲಾಗಿತ್ತು. ಇದನ್ನೇ ದಾಳವಾಗಿ ಇಟ್ಟುಕೊಂಡು ರಾಜಕೀಯವಾಗಿ ನನ್ನ ಏಳಿಗೆ ಸಹಿಸದೆ ಅಪಪ್ರಚಾರ ಮಾಡಿ ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ. ಈ ಸಂಬಂಧ ನಾನು ಅರಣ್ಯ ಇಲಾಖೆಯ ಮೇಲೆ ಯಾವುದೇ ಒತ್ತಡ ಹಾಕಿಲ್ಲ. ಅವರು ಹಾಕುವ ದಂಡವನ್ನು ಪಾವತಿಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News