ಅಪಘಾತ: ಆರೋಪಿಗೆ ಶಿಕ್ಷೆ

Update: 2020-02-17 17:07 GMT

ಉಡುಪಿ, ಫೆ.17: ಕ್ರೇನ್‌ನ್ನು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಬೈಕ್‌ನಲ್ಲಿ ಸಹಸವಾರಳಾಗಿ ತೆರಳು ತಿದ್ದ ಯುವತಿಯ ಮರಣಕ್ಕೆ ಕಾರಣವಾಗಿ, ಸವಾರ ಗಂಭೀರ ಗಾಯಗೊಳ್ಳುವಂತೆ ಮಾಡಿದ ಕ್ರೇನ್ ಚಾಲಕನಿಗೆ ಉಡುಪಿಯ ಹೆಚ್ಚುವರಿ ಜೆಎಂಎಫ್ ನ್ಯಾಯಾಲಯ ಐದು ತಿಂಗಳ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.

2015ರ ಡಿ.12ರಂದು ಬೆಳಗ್ಗೆ ಬಂಟ್ವಾಳ ತಾಲೂಕು ಪಾಣೆಮಂಗಳೂರಿನ ಆರೋಪಿ ರೋಹಿತ್, ತನ್ನ ಕ್ರೇನ್‌ನ್ನು ಉಡುಪಿ ಕಡೆಯಿಂದ ಬ್ರಹ್ಮಾವರ ಕಡೆಗೆ ಉಡುಪಿ ಪುತ್ತೂರು ಗ್ರಾಮದ ಸಂತೆಕಟ್ಟೆ ಬಳಿ ಅತಿವೇಗ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಉಡುಪಿ ಪುತ್ತೂರು ಗ್ರಾಮದ ಸಂತಕಟ್ಟೆ ಬಳಿ ರಸ್ತೆಯ ತೀರ ಬಲಕ್ಕೆ ಚಲಾಯಿಸಿಕೊಂಡು ಬಂದು ಪ್ರದೀಪ ಅಚಾರ್ಯ ಅವರು ತಂಗಿ ಪವಿತ್ರಾರೊಂದಿಗೆ ಸಾಗುತಿದ್ದ ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದಿತ್ತು.

ಇದರಿಂದ ಮೋಟಾರು ಸೈಕಲ್ ಹಿಂದಿನಿಂದ ಬರುತಿದ್ದ ಟೆಂಪೋ ಟ್ರಾವೆಲರ್‌ಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ಪ್ರದೀಪರಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಪವಿತ್ರ ಅವರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತ ಪಟ್ಟಿದ್ದರು. ಈ ಬಗ್ಗೆ ಉಡುಪಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಆಗಿನ ನಿರೀಕ್ಷಕ ಶ್ರೀಕಾಂತ್ ಕೆ. ನ್ಯಾಯಾಲಯಕ್ಕೆ ದೋಷಾರೋಣೆ ಪಟ್ಟಿಯನ್ನು ಸಲ್ಲಿಸಿದ್ದರು.

ಪ್ರಕರಣ ವಿಚಾರಣೆ ಉಡುಪಿ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯ ದಲ್ಲಿ ನಡೆದಿದ್ದು, ಪ್ರಕರಣದ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿದ ನ್ಯಾಯಾಧೀಶ ಮಂಜುನಾಥ್ ಎಂ.ಎಸ್. ಅವರು ಆರೋಪಿ ವಿರುದ್ಧ ಮೇಲಿನ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ ಆರೋಪಿಗೆ ಬಾ.ದಂ.ಸಂ ಕಲಂ 279, 338, 304(ಎ) ರಡಿ 1 ವರ್ಷ 5 ತಿಂಗಳು ಸಾದಾ ಶಿಕ್ಷೆ ಮತ್ತು 3,000ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಪ್ರಕರಣದಲ್ಲಿ ಸರಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮಮ್ತಾಜ್ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News