ಬಜ್ಪೆ: ರಸ್ತೆಯಲ್ಲಿ ಸಿಕ್ಕಿದ ಪರ್ಸ್ ವಾರಸುದಾರರಿಗೆ ಮರಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ
ಮಂಗಳೂರು, ಫೆ.17: ರಸ್ತೆ ಮಧ್ಯೆ ಸಿಕ್ಕ ಪರ್ಸ್‌ನ್ನು ವಿದ್ಯಾರ್ಥಿಗಳು ವಾರಸುದಾರರಿಗೆ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಪರ್ಸ್ ಸ್ವೀಕರಿಸಿದ ಬಜ್ಪೆಯ ಜೆರಿನಗರದ ಮುಹಮ್ಮದ್ ಕಳವಾರು ಆ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವುದಲ್ಲದೆ, ಉಡುಗೊರೆಗಳನ್ನೂ ನೀಡಿ ಶುಭ ಹಾರೈಸಿದ್ದಾರೆ.
ಬಜ್ಪೆಯ ಜೆರಿನಗರದ ಪಾಪ್ಯುಲರ್ ಬಂಟ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ 6ನೇ ತರಗತಿಯ ನಿಶಾಂತ್ ಎಸ್. ಶೆಟ್ಟಿ, 8ನೇ ತರಗತಿಯ ಓಂಕಾರ್ ಪಿ. ಶೆಟ್ಟಿ ಪರವಾಗಿ ಸಹೋದರಿ ಸನ್ಮಾನ ಸ್ವೀಕರಿಸಿದರು.
‘ಕಳೆದ ಎರಡು ದಿನಗಳ ಹಿಂದೆ ಮನೆಯಿಂದ ಬಜ್ಪೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದೆ. ಈ ವೇಳೆ ಪರ್ಸ್ ದಾರಿಮಧ್ಯೆ ಕಳೆದುಹೋಯಿತು. ಅದರಲ್ಲಿ 13 ಸಾವಿರ ರೂ. ನಗದು ಸಹಿತ ಮಹತ್ವದ ದಾಖಲೆಗಳಿದ್ದವು. ತುಂಬ ಸಮಯ ಹುಡುಕಾಡಿದರೂ ಪರ್ಸ್ ಪತ್ತೆಯಾಗಿರಲಿಲ್ಲ. ಬೇಸರದಿಂದ ಮನೆಯತ್ತ ತೆರಳುತ್ತಿದ್ದಾಗ ದಿನಸಿ ಅಂಗಡಿಯ ಭಾಸ್ಕರ್ ತಡೆದು ನಿಲ್ಲಿಸಿ, ಪಾಪ್ಯುಲರ್ ಬಂಟ್ಸ್ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳಿಗೆ ನಿಮ್ಮ ಪರ್ಸ್ ಸಿಕ್ಕಿದೆ ಎಂದಾಗ ಮಕ್ಕಳ ಬಗ್ಗೆ ರೋಮಾಂಚನ ಎನಿಸಿತು’ ಎಂದು ಮುಹಮ್ಮದ್ ಕಳವಾರು ತಿಳಿಸಿದ್ದಾರೆ.
ಶಾಲಾ ಮುಖ್ಯ ಶಿಕ್ಷಕಿಯನ್ನು ಭೇಟಿಯಾಗಿ ಮಕ್ಕಳನ್ನು ಸನ್ಮಾನಿಸಿದೆ. ಈ ಸನ್ಮಾನ ಮತ್ತು ಉಡುಗೊರೆ ದೊಡ್ಡದಲ್ಲ. ಆ ಮಕ್ಕಳು ಸಮಾಜದಲ್ಲಿ ಇನ್ನೂ ಗುರುತಿಸುವಂತಾಗಲಿ. ಅಲ್ಲದೆ, ಆ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭ ಬಜ್ಪೆ ಗ್ರಾಪಂ ಸದಸ್ಯ ಸಿರಾಜ್ ಮದನಿ, ಅಶ್ರಫ್ ಮುಂಬೈ, ಮುಸ್ತಫಾ ಬಿ.ಎಚ್., ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.