ಸುರತ್ಕಲ್: ಅಡುಗೆ ಅನಿಲ ದರ ಏರಿಕೆ ವಿರೋಧಿಸಿ ಎಸ್‌ಡಿಪಿಐ ಪ್ರತಿಭಟನೆ
ಮಂಗಳೂರು, ಫೆ.17: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಸುರತ್ಕಲ್ ವಲಯದಿಂದ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಸುರತ್ಕಲ್ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಸ್‌ಡಿಟಿಯು (ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್) ಜಿಲ್ಲಾ ಜೊತೆ ಕಾರ್ಯ ದರ್ಶಿ ಇರ್ಫಾನ್ ಜನತಾಕಾಲನಿ, ಅಚ್ಛೇ ದಿನ್ ಘೋಷಣೆಯೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರವು ತನ್ನ ಆಡಳಿತದುದ್ದಕ್ಕೂ ಬೆಲೆ ಏರಿಕೆ ಹಾಗೂ ಆರ್ಥಿಕ ಹಿಂಜರಿತದಿಂದ ದೇಶದ ಜನರಿಗೆ ಅನ್ಯಾಯ ಮಾಡುತ್ತಾ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರಕಾರವು ಜನರಿಗೆ ಜೀವನ ಮಾಡಲಾರದಂತಹ ಪರಿಸ್ಥಿತಿ ನಿರ್ಮಾಣ ಮಾಡಿದೆ. ಒಂದು ಕಡೆ ಉದ್ಯೋಗ ನಷ್ಟ, ಇನ್ನೊಂದೆಡೆ ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆ ಏರಿಸಿ ಅಚ್ಛೇ ದಿನ್‌ನ ಕೊಡುಗೆಯನ್ನು ಕೊಟ್ಟಿದೆ ಎಂದು ಲೇವಡಿ ಮಾಡಿದರು. ಅಸಮರ್ಥ ಆಡಳಿತದಿಂದಾಗಿ ಜನರು ಬೇಸತ್ತು ಹೋಗಿದ್ದಾರೆ. ತಕ್ಷಣವೇ ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆಯನ್ನು ಇಳಿಸಲು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ನೌಶಾದ್ ಚೊಕ್ಕಬೆಟ್ಟು, ಎಸ್‌ಡಿಪಿಐ ರಾಜ್ಯ ಸಮಿತಿಯ ಸದಸ್ಯ ನೂರುಲ್ಲಾ ಕುಲಾಯಿ ಮತ್ತಿತರರು ಉಪಸ್ಥಿತರಿದ್ದರು. ಜಬ್ಬಾರ್ ಕೃಷ್ಣಾಪುರ ಕಾರ್ಯಕ್ರಮ ನಿರೂಪಿಸಿದರು.