ಸಾಕುಪುತ್ರಿ ರಾಜೇಶ್ವರಿಯ ವಿವಾಹ ನೆರವೇರಿಸಿದ ಅಬ್ದುಲ್ಲಾ-ಖದೀಜಾ ದಂಪತಿ

Update: 2020-02-17 17:57 GMT

ಕಾಸರಗೋಡು: ಇಂದೊದು ವಿಶೇಷ ಮದುವೆ. ಇಲ್ಲಿ ವಧುವಿನ ಹೆಸರು ರಾಜೇಶ್ವರಿ. ಮದುವೆ ಮಾಡಿಸಿಕೊಟ್ಟ ಪೋಷಕರ ಹೆಸರು ಅಬ್ದುಲ್ಲಾ-ಖದೀಜಾ. ಈ ವಿಶೇಷ ವಿವಾಹಕ್ಕೆ ಸಾಕ್ಷಿಯಾದದ್ದು ಕಾಸರಗೋಡಿನ ಕಾಞಂಗಾಡ್.

ಸಣ್ಣ ವಯಸ್ಸಿನಲ್ಲೇ ಹೆತ್ತವರನ್ನು ಕಳೆದುಕೊಂಡಿದ್ದ ರಾಜೇಶ್ವರಿಯನ್ನು ಸ್ವಂತ ಮಗಳಂತೆ ಸಲಹಿದ್ದರು ಕೆ .ಅಬ್ದುಲ್ಲಾ -ಖದೀಜಾ ದಂಪತಿ. ರಾಜೇಶ್ವರಿಯ ಎಲ್ಲಾ ಖರ್ಚು, ವೆಚ್ಚಗಳನ್ನು ತಾವೇ ಭರಿಸಿದ ಇವರು ಇದೀಗ ವಿವಾಹ ಮಾಡಿಕೊಟ್ಟಿದ್ದಾರೆ.

ಈಗ  ರಾಜೇಶ್ವರಿಗೆ 22 ವರ್ಷ. ಹನ್ನೆರಡು ವರ್ಷಗಳ ಹಿಂದೆ ಮೇಲ್ಪರಂಬದ ಅಬ್ದುಲ್ಲಾರ ಮನೆಗೆ ತಮಿಳು ಮೂಲದ ಅಲೆಮಾರಿ ಮಹಿಳೆಯೊಬ್ಬರ ಜೊತೆ ಬಾಲಕಿ ರಾಜೇಶ್ವರಿ ತಲುಪಿದ್ದರು. ನಂತರ ತಂದೆ - ತಾಯಿ ತೀರಿಕೊಂಡಿರುವ ವಿಚಾರ ತಿಳಿದುಬಂದಿದ್ದು,   ಬಾಲಕಿಯನ್ನು ಅಬ್ದುಲ್ಲಾರ ಕುಟುಂಬ ತಮ್ಮ ಮಗಳಾಗಿ ಸ್ವೀಕರಿಸಿತು. ಅಬ್ದುಲ್ಲಾರ ಮೂವರು ಮಕ್ಕಳ ಜೊತೆ ರಾಜೇಶ್ವರಿ ಮತ್ತೋರ್ವ ಮಗಳಾದರು. 22 ವರ್ಷವಾಗುತ್ತಲೇ ರಾಜೇಶ್ವರಿಯ ವಿವಾಹದ ಬಗ್ಗೆ ಚಿಂತನೆ ನಡೆಸಿದ ಅಬ್ದುಲ್ಲಾ-ಖದೀಜಾ ದಂಪತಿ ವರನಿಗಾಗಿ ಹುಡುಕಾಟ ಆರಂಭಿಸಿದರು. ಕೊನೆಗೆ ವಿಷ್ಣು ಪ್ರಸಾದ್ ಜೊತೆ ವಿವಾಹಕ್ಕೆ ತೀರ್ಮಾನಿಸಲಾಯಿತು.

ಕ್ಷೇತ್ರದ ಮುಖ್ಯ ತಂತ್ರಿಯವರ ನೇತೃತ್ವದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ರಾಜೇಶ್ವರಿ ಸಂಬಂಧಿಕರಾಗಿ ಅಬ್ದುಲ್ಲಾ-ಖದೀಜಾ ದಂಪತಿ, ವರ ವಿಷ್ಣುಪ್ರಸಾದ್ ರ ಪೋಷಕರು, ಸಂಬಂಧಿಕರು, ಹಿತೈಷಿಗಳು ಪಾಲ್ಗೊಂಡಿದ್ದರು.  ರಾಜೇಶ್ವರಿ ಯನ್ನು ಕಾಞಂಗಾಡ್ ಶ್ರೀ ಮನ್ಯೋಟ್ಟ್  ಕ್ಷೇತ್ರದಲ್ಲಿ ಕಾಞಂಗಾಡ್ ಪುದಿಯ ಕೋಟದ ವಿಷ್ಣುಪ್ರಸಾದ್ ವಿವಾಹವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News