​ಕಂಬಳ: ಹೊಸ ದಾಖಲೆ ನಿರ್ಮಿಸಿದ ನಿಶಾಂತ್ ಶೆಟ್ಟಿ

Update: 2020-02-18 15:24 GMT

ಮಂಗಳೂರು, ಫೆ.18: ಕಂಬಳ ಕ್ರೀಡೆಯಲ್ಲಿ ಕೆಲವೇ ದಿನದ ಹಿಂದೆ 9.55ಸೆಕೆಂಡ್‌ನಲ್ಲಿ 100 ಮೀಟರ್ ತಲುಪುವ ಮೂಲಕ ಮೂಡುಬಿದಿರೆ ಮಿಜಾರಿನ ಶ್ರೀನಿವಾಸ ಗೌಡ ದಾಖಲೆ ಬರೆದರೆ, ಅದೇ ದಾಖಲೆಯನ್ನು ನಿಶಾಂತ್ ಶೆಟ್ಟಿ 9.52ಸೆಕೆಂಡ್‌ನಲ್ಲಿ ಮುರಿಯುವ ಮೂಲಕ  ಹೊಸ ದಾಖಲೆ ನಿರ್ಮಿಸಿದ್ದಾರೆ.

ಈ ಮೂಲಕ ಕಂಬಳದ 100 ಮೀಟರ್ ದಾಖಲೆ ಸಾಧಕರ ಪಟ್ಟಿಯಲ್ಲಿ ನಾಲ್ಕು ಮಂದಿಯ ಹೆಸರು ಸೇರ್ಪಡೆಯಾಗಿದೆ.

ಫೆ.1ರಂದು ಮಂಗಳೂರು ಸಮೀಪದ ಐಕಳದಲ್ಲಿ ನಡೆದ ಕಂಬಳದಲ್ಲಿ ಶ್ರೀನಿವಾಸ ಗೌಡ ಅವರು 142.50ಮೀಟರ್ ದೂರದ ಕೆರೆಯನ್ನು ಕೇವಲ 13.62 ಸೆಕೆಂಡ್‌ಗಳಲ್ಲಿ ತಲುಪಿ ಅಚ್ಚರಿ ಮೂಡಿಸಿದ್ದರು. ಇದೇ ಅವಧಿಯನ್ನು 100 ಮೀಟರ್‌ಗೆ ಹೋಲಿಸಿದರೆ 9.55 ಸೆಕೆಂಡ್ ಆಗಿದೆ. ಆದರೆ ಇದೇ ದಾಖಲೆಯನ್ನು ರವಿವಾರ ನಡೆದ ವೇಣೂರು ಸೂರ್ಯ-ಚಂದ್ರ ಕಂಬಳದಲ್ಲಿ ಬಜಗೋಳಿ ಜೋಗಿಬೆಟ್ಟಿ ನಿಶಾಂತ್ ಶೆಟ್ಟಿ ಮುರಿದು ಮತ್ತೊಂದು ಸಾಧನೆಗೈದಿದ್ದಾರೆ.

ಹಗ್ಗ ಹಿರಿಯ ವಿಭಾಗದ ಸೆಮಿ ಫೈನಲ್‌ನಲ್ಲಿ ಹೊಸಬೆಟ್ಟು ಗೋಪಾಲಕೃಷ್ಣ ಭಟ್ ಅವರ ಕೋಣಗಳು 143 ಮೀಟರ್ ಕರೆಯಲ್ಲಿ 13.61 ಸೆಕೆಂಡ್‌ನಲ್ಲಿ ತಲುಪಿದ್ದು, ಈ ವೇಗ 100 ಮೀಟರ್‌ಗೆ ಹೋಲಿಸಿದರೆ 9.52 ಸೆಕೆಂಡ್ ಆಗಿದೆ.

ಈ ಹಿಂದೆ 2019ರಲ್ಲಿ ಪುತ್ತೂರು ಕಂಬಳದಲ್ಲಿ ಅದ್ಭುತ ಪ್ರದರ್ಶನ ನೀಡಿದ ಅಕ್ಕೇರಿ ಸುರೇಶ್ ಶೆಟ್ಟಿ (9.57) ಮತ್ತು 2015ರಲ್ಲಿ ಇರ್ವತ್ತೂರು ಆನಂದ್ (9.57) ಸೆಕೆಂಡ್‌ಗಳಲ್ಲಿ 100 ಮೀಟರ್ ಓಡುವ ಮೂಲಕ ದಾಖಲೆ ಮಾಡಿದ್ದರು. ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್‌ನ ಸಾಧನೆಯನ್ನು ಇಲ್ಲಿ ಹೋಲಿಸಿದರೆ ನಾಲ್ವರು ಆ ದಾಖಲೆಯನ್ನು ಮುರಿದಂತಾಗಿದೆ. 2009ರಲ್ಲಿ ಜಮೈಕಾದ ಉಸೇನ್ ಬೋಲ್ಟ್ ಟ್ರಾಕ್‌ನಲ್ಲಿ 100 ಮೀ. ಓಟವನ್ನು 9.58 ಸೆಕೆಂಡ್‌ನಲ್ಲಿ ಕ್ರಮಿಸಿ ವಿಶ್ವದಾಖಲೆ ಮಾಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆ: ಕಂಬಳದ ಹಗ್ಗ ಹಿರಿಯ ವಿಭಾಗದ ಸೆಮಿ ಫೈನಲ್‌ ನಿಶಾಂತ್ ಶೆಟ್ಟಿ ನೂತನ ದಾಖಲೆ ಮಾಡುತ್ತಿದ್ದಂತೆ ವಾಟ್ಸ್‌ಆ್ಯಪ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹಲವು ಮಂದಿ ಅಭಿನಂದನೆ ಸಲ್ಲಿಸಿದ್ದಾರೆ. ಕಂಬಳದಲ್ಲಿ ಒಂದರ ಹಿಂದೆ ಒಂದು ದಾಖಲೆ ಸೃಷ್ಟಿಯಾಗುತ್ತಿದ್ದು, ಕಂಬಳಾಭಿಮಾನಿಗಳಲ್ಲಿ ಹರ್ಷ ತಂದಿದೆ.

ಎಲ್ಲರೂ ಅಕಾಡಮಿ ಸದಸ್ಯರು

ವೇಣೂರು ಪೆರ್ಮುಡದಲ್ಲಿ ನಡೆದ ‘ಸೂರ್ಯ-ಚಂದ್ರ’ ಜೋಡುಕರೆ ಕಂಬಳದಲ್ಲಿ ಕೋಣಗಳನ್ನು ಓಡಿಸಿ ಪದಕ ಗೆದ್ದ ಪಣಪಿಲ ಪ್ರವೀಣ್ ಕೋಟ್ಯಾನ್, ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ, ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ, ಕಡಂದಲೆ ಅತಿಥ್ ಶೆಟ್ಟಿ, ಬೆಳ್ಳಾರ್ ಪನ್ನೆ ನಾಸಿರ್, ನಕ್ರೆ ಮಂಜುನಾಥ ಭಂಡಾರಿ ಕಂಬಳ ಅಕಾಡಮಿಯಲ್ಲಿ ತರಬೇತಿ ಪಡೆದವರಾಗಿದ್ದಾರೆ. ಇದು ಕೂಡಾ ಒಂದು ದಾಖಲೆಯಾಗಿದ್ದು, ಕಂಬಳ ಅಕಾಡಮಿಯ ಮಹತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎನ್ನುತ್ತಾರೆ ಕಂಬಳ ಅಕಾಡಮಿಯ ಸಂಚಾಲಕರ ಗುಣಪಾಲ ಕಡಂಬ.

ದಾಖಲೆ ಬರೆದ ಕೋಣಗಳು, ಕೋಣಗಳು ಓಡಿಸಿದವರು - ಸಮಯ

ಏರಿಮಾರು ಗೋಪಾಲಕೃಷ್ಣ ಭಟ್ ನಿಶಾಂತ್ ಶೆಟ್ಟಿ- 9.52ಸೆ.
ಇರುವೈಲು ಪಾನಿಲ ಬಾಡ ಪೂಜಾರಿ ಶ್ರೀನಿವಾಸ ಗೌಡ- 9.55ಸೆ.
ಬೋಳದಗುತ್ತು ಸತೀಶ್ ಶೆಟ್ಟಿ ಅಕ್ಕೇರಿ ಸುರೇಶ್ ಶೆಟ್ಟಿ- 9.57ಸೆ.
ಇರುವೈಲು ಪಾನಿಲ ಬಾಡ ಪೂಜಾರಿ ಇರ್ವತ್ತೂರು ಆನಂದ್- 9.57ಸೆ.

ವೇಣೂರು ಕಂಬಳದ ಹಗ್ಗ ಹಿರಿಯ ವಿಭಾಗದ ಸೆಮಿ ಫೈನಲ್‌ನಲ್ಲಿ ಹೊಸಬೆಟ್ಟು ಗೋಪಾಲಕೃಷ್ಣ ಭಟ್ ಅವರ ಕೋಣಗಳನ್ನು ನಾನು ಓಡಿಸಿದ್ದು, 100ಮೀಟರ್‌ನ್ನು 9.52 ಸೆಕೆಂಡ್ ತಲುಪಿದೆ. ಈ ಟೈಮ್ಸಿಂಗ್ ನನ್ನ ಬೆಸ್ಟ್ ಟೈಮಿಂಗ್ಸ್ ಆಗಿದ್ದು ಈ ಬಗ್ಗೆ ತುಂಬಾ ಖುಷಿಯಿದೆ. ನಾನು ಪಂದ್ಯ ಗೆಲ್ಲಬೇಕೆಂದು ಕೋಣವನ್ನು ಓಡಿಸಿದ್ದೇನೆಯೇ ಹೊರತು ಯಾವುದೇ ದಾಖಲೆಗಾಗಿ ಅಲ್ಲ. ಉಸೇನ್ ಬೋಲ್ಟ್‌ನಂತಹ ವಿಶ್ವದ ಅಥ್ಲೀಟ್ ಸಾಧಕರ ಜತೆ ನಮ್ಮ ಓಟವನ್ನು ಹೋಲಿಕೆ ಮಾಡುವುದು ಸರಿಯಲ್ಲ. ಆ ಓಟಕ್ಕೂ-ಕಂಬಳಕ್ಕೂ ತುಂಬಾ ವ್ಯತ್ಯಾಸವಿದೆ.
-ನಿಶಾಂತ್ ಶೆಟ್ಟಿ ಬಜಗೋಳಿ, ನೂತನ ದಾಖಲೆ ಮಾಡಿದವರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News