ಪಾಕ್ ಬೂದುಪಟ್ಟಿಯಲ್ಲೇ ಮುಂದುವರಿಕೆ; ಎಫ್‌ಎಟಿಎಫ್ ನಿರ್ಧಾರ

Update: 2020-02-18 15:34 GMT

ಪ್ಯಾರಿಸ್ (ಫ್ರಾನ್ಸ್), ಫೆ. 18: ಭಯೋತ್ಪಾದನೆಗೆ ಪೂರೈಕೆಯಾಗುತ್ತಿರುವ ಹಣದ ಮೇಲೆ ನಿಗಾ ಇಡುವ ಜಾಗತಿ ಸಂಸ್ಥೆ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್)ನ 'ಬೂದು ಪಟ್ಟಿ'ಯಲ್ಲೇ ಮುಂದುವರಿಯುವಲ್ಲಿ ಪಾಕಿಸ್ತಾನ ಯಶಸ್ವಿಯಾಗಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ. ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕ್ರಮಗಳನ್ನು ತೆಗೆದುಕೊಂಡಿರುವೆ ಎಂದು ಹೇಳುವ ಮೂಲಕ ಪಾಕಿಸ್ತಾನವು 'ಕಪ್ಪು ಪಟ್ಟಿ'ಯಿಂದ ನುಣುಚಿಕೊಂಡಿದೆ.ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸಲು ಭಾರತ ಪ್ರಯತ್ನಗಳನ್ನು ಮಾಡಿರುವಂತೆಯೇ, ಯಾವುದೇ ಪಟ್ಟಿಗೆ ಸೇರದೆ ತಪ್ಪಿಸಿಕೊಳ್ಳಲು ಪಾಕಿಸ್ತಾನವು ಪ್ರಯತ್ನಗಳನ್ನು ಮಾಡಿತ್ತು ಎಂದು ಮೂಲಗಳು ಹೇಳಿವೆ.

ಪ್ಯಾರಿಸ್‌ನಲ್ಲಿರುವ ಎಫ್‌ಎಟಿಎಫ್‌ನ ಪ್ರಧಾನ ಕಚೇರಿಯಲ್ಲಿ ಒಂದು ವಾರ ಸಮಾಲೋಚನೆಗಳು ನಡೆದ ಬಳಿಕ, ಶುಕ್ರವಾರ ಈ ಬಗ್ಗೆ ಸಂಸ್ಥೆಯು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದೆ.ಎಫ್‌ಎಟಿಎಫ್ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸಿದ್ದರೆ ಅದು ಆ ದೇಶದ ಆರ್ಥಿಕ ಸುಧಾರಣಾ ಕಾರ್ಯಕ್ರಮದ ಮೇಲೆ ಬಹು ದೊಡ್ಡ ಹೊಡೆತವಾಗುತ್ತಿತ್ತು. ಕಪ್ಪು ಪಟ್ಟಿಯಲ್ಲಿ ಪಾಕಿಸ್ತಾನ ಸ್ಥಾನ ಪಡೆದರೆ ಅದು ಕಠಿಣ ಆರ್ಥಿಕ ದಿಗ್ಬಂಧನಗಳಿಗೆ ಗುರಿಯಾಗುತ್ತದೆ ಎಂದು ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ತನ್ನ ಆಂತರಿಕ ವರದಿಯೊಂದರಲ್ಲಿ ಹೇಳಿತ್ತು. ಹೂಡಿಕೆ ಮತ್ತು ಬಂಡವಾಳ ಹರಿವಿನ ಮೇಲೆ ಅದು ವ್ಯತಿರಿಕ್ತ ಪರಿಣಾಮ ಬೀರುತ್ತಿತ್ತು ಹಾಗೂ ಐಎಂಎಫ್‌ನ ನಿಧಿಯ ಮೇಲೂ ಪರಿಣಾಮ ಬೀರುತ್ತಿತ್ತು.ಪಾಕಿಸ್ತಾನವು ಈ ಬಾರಿ ಟರ್ಕಿ ಮತ್ತು ಮಲೇಶ್ಯ ದೇಶಗಳ ಬೆಂಬಲದಿಂದ ಕಪ್ಪು ಪಟ್ಟಿಗೆ ಸೇರ್ಪಡೆಗೊಳ್ಳುವುದನ್ನು ತಪ್ಪಿಸಿಕೊಂಡಿದೆ. ಪಾಕಿಸ್ತಾನಕ್ಕೆ ಬೆಂಬಲ ನೀಡುವ ತಮ್ಮ ನಿರ್ಧಾರವನ್ನು ಈ ದೇಶಗಳ ನಾಯಕರು ಘೋಷಿಸಿದ್ದರು.ಆದರೆ, ಪಾಕಿಸ್ತಾನವು ಎಪ್ರಿಲ್ ವೇಳೆಗೆ ಬೂದು ಪಟ್ಟಿಯಿಂದ ಹೊರಬರದಿದ್ದರೆ ಅದು ತನ್ನಿಂತಾನೆ ಕಪ್ಪು ಪಟ್ಟಿಗೆ ಸೇರ್ಪಡೆಗೊಳ್ಳುತ್ತದೆ.ಇರಾನ್ ಈಗಾಗಲೇ ಎಫ್‌ಎಟಿಎಫ್ ಕಪ್ಪು ಪಟ್ಟಿಯಲ್ಲಿದೆ.

ಲಷ್ಕರೆ ತಯ್ಯಬ ಮತ್ತು ಜೈಶೆ ಮುಹಮ್ಮದ್ ಮುಂತಾದ ಭಯೋತ್ಪಾದಕ ಗುಂಪುಗಳಿಗೆ ಹಣ ಪೂರೈಕೆಯಾಗುತ್ತಿರುವುದನ್ನು ತಡೆಯಲು ಪಾಕಿಸ್ತಾನ ವಿಫಲವಾಗಿರುವುದಕ್ಕಾಗಿ ಅದನ್ನು ಬೂದು ಪಟ್ಟಿಯಲ್ಲೇ ಮುಂದುವರಿಸಲು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಎಫ್‌ಎಟಿಎಫ್ ನಿರ್ಧರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News