ಬ್ಯಾಂಕ್ ಮೆನೇಜರ್‌ಗಳಿಂದ ನಿಯಮ ಉಲ್ಲಂಘಿಸಿ ಸಾಲ: ಶಿರ್ವ ಠಾಣೆಯಲ್ಲಿ 9 ಪ್ರಕರಣ ದಾಖಲು

Update: 2020-02-18 15:54 GMT

ಶಿರ್ವ, ಫೆ.18: ಕಾರ್ಪೊರೇಶನ್ ಬ್ಯಾಂಕ್ ಕಟ್ಟಿಂಗೇರಿ ಶಾಖೆಯ ಶಾಖಾ ಪ್ರಬಂಧಕರುಗಳಾದ ಶಾಂತ ಹಾಗೂ ಪಿ.ಜಯರಾಮ್ ಎಂಬವರು ಹಲವು ಮಂದಿಗೆ ಯಾವುದೇ ಆರ್ಥಿಕ ಆಧಾರ ಹಾಗೂ ಭದ್ರತೆ ತೆಗೆದುಕೊಳ್ಳದೆ ಬ್ಯಾಂಕಿನ ನಿಯಮಗಳನ್ನು ಪಾಲಿಸದೆ ಸಾಲದ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ನೀಡುವ ಮೂಲಕ ಬ್ಯಾಂಕಿಗೆ ಮೋಸ ಮಾಡಿರುವ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಒಂಭತ್ತು ಪ್ರಕರಣಗಳು ದಾಖಲಾಗಿವೆ.

ಶಾಖಾ ಪ್ರಬಂಧಕಿ ಶಾಂತ ಕಟ್ಟಿಂಗೇರಿಯ ಸುಮಂಗಲಾ ರಾವ್‌ಗೆ 2015ರ ಫೆ.11ರಂದು 10ಲಕ್ಷ ರೂ., ಹೇರೂರಿನ ಸಂದೇಶ್ ಕುಮಾರ್ ಶೆಟ್ಟಿಗೆ 2015ರ ಫೆ.23ರಂದು 5ಲಕ್ಷ ರೂ. ಮತ್ತು 2015ರ ಮಾ.19ರಂದು 10ಲಕ್ಷ ರೂ., ಉಡುಪಿ ಬೈಲೂರಿನ ದುರ್ಗಾನಗರದ ಚಂದ್ರಕಾಂತ್ ರಾವ್‌ಗೆ 2015ರ ಫೆ13ರಂದು 10ಲಕ್ಷ ರೂ. ಮತ್ತು 2014ರ ಜು.24ರಂದು 4,80,000ರೂ., ಕಟ್ಟಿಂಗೇರಿಯ ರವಿ ಆಚಾರಿಗೆ 2014ರ ಮಾ.24ರಂದು 15ಲಕ್ಷ ರೂ. ಸಾಲ ಮಂಜೂರು ಮಾಡಿದ್ದರು ಎಂದು ದೂರಲಾಗಿದೆ.

ಅದೇ ರೀತಿ ಶಾಖಾ ಪ್ರಬಂಧಕ ಪಿ.ಜಯರಾಮ್ ಕಟ್ಟಿಂಗೇರಿಯ ಮ್ಯಾಕ್ಸಿಂ ಮರ್ಸಿಲೈನ್‌ಗೆ 2017ರ ಮೇ25ರಂದು 10ಲಕ್ಷ ರೂ., ಕಟ್ಟಿಂಗೇರಿಯ ಚಂದ್ರಕಾಂತ ರಾವ್ ಮತ್ತು ಸುಮಂಗಲ ರಾವ್ ಅವರಿಗೆ 2015ರ ಅ.3ರಂದು 12ಲಕ್ಷ ರೂ., ಮಣಿಪಾಲ ಹುಡ್ಕೋ ಕಾಲನಿ ವಾಣಿ ಮತ್ತು ಕುಕ್ಕುಂದೂರು ಹರೀಶ ಎಂಬವರಿಗೆ 2016 ಮಾ.24ರಂದು 3,00,000ರೂ ಸಾಲವನ್ನು ಮಂಜೂರು ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಕಾರ್ಪೊರೇಶನ್ ಬ್ಯಾಂಕಿನ ಉಡುಪಿ ವಲಯ ಕಚೇರಿಯ ಉಪ ಮಹಾಪ್ರಬಂಧಕಿ ಡೇಲಿಯ ಎ.ಡೇಸ ನೀಡಿರುವ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಶಾಖಾ ಪ್ರಬಂಧಕರು ಹಾಗೂ ಸಾಲ ಪಡೆದ ಆರೋಪಿಗಳ ವಿರುದ್ಧ 406, 409, 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News