ಹಾವಂಜೆ: ಯಕ್ಷಗಾನ ಪ್ರಶಸ್ತಿ ಪ್ರದಾನ

Update: 2020-02-18 16:05 GMT

 ಉಡುಪಿ, ಫೆ.18:ಭಾವನಾ ಪ್ರತಿಷ್ಠಾನ, ಹಾವಂಜೆಯ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಂಗಮಂದಿರದಲ್ಲಿ ಸಂಯೋಜಿಸಿದ ಯಕ್ಷಗಾನ ಕಾರ್ಯಕ್ರಮ ದಲ್ಲಿ ಯಕ್ಷ ಕಲಾಸಿಂಧು ಪುರಸ್ಕಾರ ಪ್ರದಾನ, ಸನ್ಮಾನ ಹಾಗೂ ಭಾವನಾ ಯಕ್ಷರಂಗದ ಸದಸ್ಯರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂಹಿತಾ ಸೌಹಾರ್ದ ಸಹಕಾರ ಸಂಘದ ಮುಖ್ಯ ನಿರ್ದೇಶಕ ರಾಘವೇಂದ್ರ ಭಟ್ ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕಲೆಯ ಬಗೆಗೆ ನಿರಂತರ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವ ಭಾವನಾ ತಂಡವನ್ನು ಶ್ಲಾಘಿಸಿದರು.

ಇದೇ ಸಂದರ್ಭ ಯಕ್ಷಗಾನ ಗುರುಗಳಾದ ಉದಯ ಕುಮಾರ್ ಮಧ್ಯಸ್ಥರಿಗೆ ಯಕ್ಷ ಕಲಾಸಿಂಧು ಪುರಸ್ಕಾರ, ರಜತ ಪದಕ ಮತ್ತು ಗೌರವ ಧನ ನೀಡಿ ಸಮ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮಧ್ಯಸ್ಥರು ತಮ್ಮ ಅನುಭವಗಳನ್ನು ಬಿಚ್ಚಿಟ್ಟರಲ್ಲದೇ ತಾನು ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿ ಕೊಳ್ಳಲು ಮತ್ತು ಬೆಳೆಯಲು ಕಾರಣವಾದ ಅಂಶಗಳನ್ನು ಸ್ಮರಿಸಿಕೊಂಡರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕಿ ಉಷಾಬಾಯಿ ಕುಕ್ಕಿಕಟ್ಟೆ, ಸಮಾಜ ಸೇವಕ ಫ್ರಾಂಕ್ಲಿನ್ ಡಿಸೋಜಾ ಕೊಳಲಗಿರಿ, ಉಪ್ಪೂರು ವ್ಯವಸಾಯ ಸೇವಾ ಸಹಕಾರ ಸಂಘದ ಕಾರ್ಯದರ್ಶಿ ಸಂದೀಪ್ ಶೆಟ್ಟಿ, ಯಕ್ಷಗಾನ ಗುರುಗಳಾದ ದೇವದಾಸ್ ರಾವ್ ಕೂಡ್ಲಿ ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುರೇಶ್ ಬಿ.ಶೆಟ್ಟಿ ವಹಿಸಿದ್ದರು. ಭಾವನಾ ಪ್ರತಿಷ್ಠಾನದ ಅಧ್ಯಕ್ಷ ಹಾವಂಜೆ ಮಂಜುನಾಥ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದಯಾನಂದ ಕರ್ಕೇರ ಉಗ್ಗೆಲ್‌ಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News