ಕಳವು ಪ್ರಕರಣ: ಸ್ಕೂಟರ್ ಸಹಿತ ಆರೋಪಿಯ ಬಂಧನ

Update: 2020-02-18 16:59 GMT

ಬಂಟ್ವಾಳ, ಫೆ.18: ದ್ವಿಚಕ್ರ ವಾಹನ ಕಳವು ಪ್ರಕರಣದ ಆರೋಪದಲ್ಲಿ ಆರೋಪಿಯೊಬ್ಬನನ್ನು ಬಂಧಿಸಿರುವ ಬಂಟ್ವಾಳ ನಗರ ಠಾಣೆಯ ಪೊಲೀಸರು ಸ್ಕೂಟರ್ ಒಂದನ್ನು ವಶಕ್ಕೆ ಪಡೆದಿದ್ದಾರೆ.

ತಮಿಳುನಾಡಿನ ಪುದುಕೋಟೆ ಜಿಲ್ಲೆಯ ಅರಂತಾಂಗಿ ತಾಲೂಕಿನ ಒಡಕವಾಡಿ ನಿವಾಸಿ ರಾಜಾ ಕೆ.(38) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಕಲ್ಲಡ್ಕ ನಿವಾಸಿ ಸಂದೇಶ ಎಂಬವರು ಮೆಲ್ಕಾರ್ ನಲ್ಲಿರುವ ಮೊಬೈಲ್‌ ಅಂಗಡಿಯ ಕೆಳಗಡೆ ನಿಲ್ಲಿಸಿದ್ದ ಹೊಂಡಾ ಆಕ್ಟೀವ್ ಸ್ಕೂಟರ್ ಫೆ.13ರಂದು ಕಳವಾದ ಬಗ್ಗೆ ಫೆ.15ರಂದು ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮಂಗಳವಾರ ಬೆಳಗ್ಗೆ ಕಲ್ಲಡ್ಕ ದಾಸಕೋಡಿ ಪ್ರದೇಶದಲ್ಲಿ ಬಂಟ್ವಾಳ ನಗರ ಠಾಣಾ ಎಸ್ಸೈ ಅವಿನಾಶ್ ಹಾಗೂ ಸಿಬ್ಬಂದಿ ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಸ್ಕೂಟರ್ ನಲ್ಲಿ ಬಂದ ಆರೋಪಿ ರಾಜಾ ಕೆ. ಸ್ಕೂಟರ್ ನಿಲ್ಲಿಸದೆ ಪರಾರಿಯಾಗಿದ್ದು ಸಂಶಯಗೊಂಡ ಪೊಲೀಸರು ಸ್ಕೂಟರ್ ಅನ್ನು ಬೆನ್ನಟ್ಟಿ ಹಿಡಿದು ತಪಾಸಣೆ ನಡೆಸಿದಾಗ ಸ್ಕೂಟರ್ ಕಳವುಗೈದಿರುವುದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ಆರೋಪಿಯನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆಗೆ ಒಳಪಡಿಸಿದಾಗ, ಮೆಲ್ಕಾರ್ ನಲ್ಲಿ ಕಳವುಗೈದ ಬಳಿಕ ಸ್ಕೂಟರ್ ಅನ್ನು ಬಳಿಕ ಮಂಗಳೂರಿಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗಿದ್ದ. ಆದರೆ ಮಂಗಳೂರಿನಲ್ಲಿ ಮಾರಾಟವಾಗದ ಕಾರಣ ಸ್ಕೂಟರನ್ನು ವಾಪಸ್ ತಂದು ಮೈಸೂರಿಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ವೇಳೆ ದಾಸಕೋಡಿಯಲ್ಲಿ ಪೊಲೀಸರಿಗೆ ಸೆರೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿವೈಎಸ್ಪಿ ವೆಲಂಟೈನ್ ಡಿಸೋಜ ಮಾರ್ಗದರ್ಶನ ದಲ್ಲಿ, ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ನೇತೃತ್ವದಲ್ಲಿ ನಗರ ಠಾಣೆಯ ಎಸ್ಸೈ ಅವಿನಾಶ್ ಮತ್ತು ಠಾಣಾ ಎಎಸ್ಸೈ ಸಂಜೀವ ಕೆ., ಪ್ರೋಬೆಷನರಿ ಎಸ್ಸೈ ಕುಮಾರ್, ಮುಖ್ಯ ಪೇದೆ ಸುರೇಶ್ ಪಡಾರ್, ಪಿ.ಸಿ.ಶ್ರೀಕಾಂತ್ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News