ವೀರರಾಣಿ ಅಬ್ಬಕ್ಕ ಉತ್ಸವ: ವಿಚಾರಗೋಷ್ಠಿ - ಪ್ರಶಸ್ತಿ ಆಯ್ಕೆ ಸಮಿತಿಯ ಸಭೆ

Update: 2020-02-18 17:04 GMT

ಮಂಗಳೂರು, ಫೆ.18: ದ.ಕ. ಜಿಲ್ಲಾಡಳಿತ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ನಡೆಸುವ ‘ವೀರರಾಣಿ ಅಬ್ಬಕ್ಕ ಉತ್ಸವ -2020’ರ ಸಲುವಾಗಿ ವಿಚಾರಗೋಷ್ಠಿ ಮತ್ತು ಪ್ರಶಸ್ತಿ ಆಯ್ಕೆ ಸಮಿತಿಯ ಸಭೆ ದ.ಕ.ಜಿಪಂ ಕಚೇರಿಯಲ್ಲಿ ಮಂಗಳವಾರ ಜರುಗಿತು.

ಜಿಪಂ ಸಿಇಒ ಡಾ.ಸೆಲ್ವಮಣಿ ಆರ್. ಅಧ್ಯಕ್ಷತೆ ವಹಿಸಿದ್ದರು. ‘ತುಳುನಾಡಿನ ರಾಣಿಯರು’ ಎಂಬ ವಿಷಯದ ಮೇಲೆ ವಿಚಾರಗೋಷ್ಠಿ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ತುಮಕೂರು ವಿವಿಯ ಚರಿತ್ರೆ ವಿಭಾಗದ ಮುಖ್ಯಸ್ಥ ಡಾ.ಕೊಟ್ರೇಶ್ ಅಧ್ಯಕ್ಷತೆ ವಹಿಸಲಿದ್ದು, ‘ಕರಿಮೆಣಸಿನ ರಾಣಿ ಚೆನ್ನಭೈರಾದೇವಿ’, ‘ಶಾಸನ ಗಳಲ್ಲಿ ತುಳುನಾಡ ರಾಣಿಯರು’ ಹಾಗೂ ‘ಅಬ್ಬಕ್ಕ ರಾಣಿಯರು’ ಎಂಬ ಪ್ರಬಂಧಗಳನ್ನು ನಾಡಿನ ಮೂವರು ಪ್ರಸಿದ್ಧ ಇತಿಹಾಸತಜ್ಞರು ಮಂಡಿಸುವ ಬಗ್ಗೆ ನಿರ್ಧರಿಸಲಾಯಿತು.

ಈ ಸಂದರ್ಭ ಬೆಂಗಳೂರು ದೂರದರ್ಶನದ ಹಿರಿಯ ಕಾರ್ಯಕ್ರಮ ನಿರ್ವಾಹಕಿ, ಕವಯಿತ್ರಿ ಆರತಿ ಎಚ್.ಎನ್. ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಲಿದ್ದು ಕನ್ನಡ, ತುಳು, ಕೊಂಕಣಿ, ಬ್ಯಾರಿ,ಹವ್ಯಕ, ಕುಂದಾಪ್ರ ಕನ್ನಡ ಮತ್ತು ಅರೆ ಭಾಷೆಗಳಲ್ಲಿ ಕವಿತೆಗಳನ್ನು ವಾಚಿಸಲಿದ್ದಾರೆ.

ಅಬ್ಬಕ್ಕ ಉತ್ಸವಕ್ಕೆ ಪೂರ್ವಭಾವಿಯಾಗಿ ಫೆ.27ರಂದು ನಗರದ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ವಿಚಾರಗೋಷ್ಠಿ ಮತ್ತು ಕವಿ ಗೋಷ್ಠಿಗಳನ್ನು ನಡೆಸಲಾಗುವುದು. ಅಬ್ಬಕ್ಕ ಪ್ರಶಸ್ತಿಗೆ ಆಯ್ಕೆಯಾದವರ ವಿವರಗಳನ್ನು ಸದ್ಯವೇ ಪ್ರಕಟಿಸಲಾಗುವುದು ಎಂದು ಡಾ.ಸೆಲ್ವಮಣಿ ತಿಳಿಸಿದರು.

ಸಮಿತಿ ಸದಸ್ಯರಾದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ವಿಜಯಲಕ್ಷ್ಮಿ ಬಿ.ಶೆಟ್ಟಿ, ನಮಿತಾ ಶ್ಯಾಂ, ಚಂದ್ರಹಾಸ ಅಡ್ಯಂತಾಯ, ಆನಂದ ಶೆಟ್ಟಿ, ಸುವಾಸಿನಿ ಬಬ್ಬುಕಟ್ಟೆ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು. ದೈಹಿಕ ಶಿಕ್ಷಣಾಧಿಕಾರಿ ರಘುನಾಥ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News