×
Ad

‘ಸಕಾಲ’ ಅರ್ಜಿ ಸ್ವೀಕಾರ ಕಡ್ಡಾಯ: ಎಡಿಸಿ ರೂಪಾ

Update: 2020-02-18 23:05 IST

ಮಂಗಳೂರು, ಫೆ.18: ಸಕಾಲ ಯೊಜನೆಯನ್ನು ಒಳಗೊಂಡಿರುವ ಎಲ್ಲ ಇಲಾಖೆಗಳು ಮುಂದಿನ ದಿನಗಳಲ್ಲಿ ಅರ್ಜಿಗಳನ್ನು ಕಡ್ಡಾಯವಾಗಿ ಸ್ವೀಕರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಕಾಲ ಯೋಜನೆ ಅಡಿಯಲ್ಲಿ ಅತ್ಯಂತ ಕಡಿಮೆ ಅರ್ಜಿ ಸ್ವೀಕೃತಿಯ ಬಗ್ಗೆ ಹಾಗೂ ಸಕಾಲ ಯೋಜನೆಯ ಸಮರ್ಪಕ ಅನುಷ್ಠಾನದ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಅರ್ಜಿ ಸ್ವೀಕರಿಸುವ ಜತೆಗೆ ನಿಗದಿತ ಸಮಯದಲ್ಲಿ ಸಾರ್ವಜನಿಕರಿಗೆ ಸೇವೆ ನೀಡಬೇಕು ಎಂದು ಹೇಳಿದರು.

12ನೇ ಸ್ಥಾನ: ಸಕಾಲ ಯೋಜನೆಯ ಪ್ರಗತಿ ರ್ಯಾಂಕ್‌ನಲ್ಲಿ ದ.ಕ. ಜಿಲ್ಲೆಯು ಈ ಹಿಂದೆ 27 ಸ್ಥಾನದಲ್ಲಿತ್ತು. ಆದರೆ ಪ್ರಸ್ತುತ ಅವಧಿಯಲ್ಲಿ ಜಿಲ್ಲೆಯು ಉತ್ತಮ ಸಾಧನೆ ತೋರಿ 12ನೇ ಸ್ಥಾನಕ್ಕೇರಿದೆ. ಇದೇ ರೀತಿಯಲ್ಲಿ ಎಲ್ಲ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಸಹಕಾರ ನೀಡಿದಲ್ಲಿ ಮುಂದಿನ ದಿನದಲ್ಲಿ ಜಿಲ್ಲೆಯು ಉತ್ತಮ ಸ್ಥಾನ ಪಡೆಯಲು ಸಾಧ್ಯವಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಸಭೆಗೆ ತಿಳಿಸಿದರು.

ಈ ಮೊದಲು ಜಿಲ್ಲೆಯು ರ್ಯಾಂಕ್‌ನಲ್ಲಿ ಹಿಂದೆ ಉಳಿಯಲು ಹಲವು ಇಲಾಖೆಗಳು ಸಕಾಲದಲ್ಲಿ ಅರ್ಜಿಯನ್ನು ಸ್ವೀಕರಿಸಿದೆ ಇದ್ದು, ಇತ್ಯರ್ಥವಾಗದೇ ಅರ್ಜಿಗಳು ಬಾಕಿ ಉಳಿದಿದ್ದವು. ಹಾಗಾಗಿಯೇ ಉನ್ನತ ಮಟ್ಟದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸಭೆಯಲ್ಲಿ ಸಹಾಯಕ ಆಯುಕ್ತ ಮದನ್ ಮೋಹನ್, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

‘ಶೋಕಾಸ್ ನೋಟಿಸ್’

ಜಿಲ್ಲೆಯಲ್ಲಿ ಹಲವು ಇಲಾಖೆಗಳು ಉತ್ತಮ ಸಾಧನೆ ದಾಖಲಿಸುತ್ತಿದ್ದರೆ, ಇನ್ನೂ ಕೆಲವು ಇಲಾಖೆಗಳು ವಿಫಲತೆ ಕಂಡಿವೆ. ಅಂತಹ ಇಲಾಖೆಯ ವಿರುದ್ಧ ಜಿಲ್ಲಾಡಳಿತ ಶೋಕಾಸ್ ನೋಟಿಸ್ ನೀಡಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News