×
Ad

ಗ್ರಾ.ಪಂ.ನಲ್ಲಿ ಸ್ವಚ್ಛತಾಗಾರ ಸಿಬ್ಬಂದಿಯಿಂದ ಅಡುಗೆ ಕೆಲಸ: ಪಿಡಿಒಗೆ ನೊಟೀಸ್

Update: 2020-02-18 23:09 IST

ಉಪ್ಪಿನಂಗಡಿ: 34ನೇ ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ಸ್ವಚ್ಛತಾಗಾರ ಹುದ್ದೆಯ ಮಹಿಳಾ ಸಿಬ್ಬಂದಿಯನ್ನು ಅಡುಗೆ ಕೆಲಸದಲ್ಲಿ ತೊಡಗಿಸಿರುವ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲಿಸಿದ ದ.ಕ. ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು 34ನೇ ನೆಕ್ಕಿಲಾಡಿ ಗ್ರಾ.ಪಂ.ನ ಪಿಡಿಒಗೆ ಎಚ್ಚರಿಕೆ ನೋಟೀಸ್ ನೀಡಿದ್ದು, ಇನ್ನು ಮುಂದೆ ಗ್ರಾ.ಪಂ.ನಲ್ಲಿ ಈ ರೀತಿಯಾಗದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದ್ದಾರೆ.

34ನೇ ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ಸ್ವಚ್ಛತಾಗಾರ ಹುದ್ದೆಯ ಮಹಿಳಾ ಸಿಬ್ಬಂದಿಯು ಗ್ರಾ.ಪಂ.ನ ಇತರ ಸಿಬ್ಬಂದಿಗಳಿಗಾಗಿ ಗ್ರಾ.ಪಂ.ನಲ್ಲಿಯೇ ಅಡುಗೆ ಕೆಲಸವನ್ನೂ ಮಾಡುತ್ತಿದ್ದರು. ಜಿಲ್ಲಾ ಪಂಚಾಯತ್‍ನಿಂದ ಸ್ವಚ್ಛತಾಗಾರ ಹುದ್ದೆಗೆ ನಿಯೋಜನೆಗೊಂಡ ಸಿಬ್ಬಂದಿಯನ್ನು ಅಡುಗೆ ಕೆಲಸಕ್ಕೆ ಬಳಸುವ ಮೂಲಕ ಅವರ ಕೆಲಸವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ಮಾಧ್ಯಮಗಳಲ್ಲೂ ವರದಿ ಬಂದಿತ್ತು. ಅಲ್ಲದೇ, ಈ ಸಿಬ್ಬಂದಿಯು ಗ್ರಾ.ಪಂ.ನಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಬಗ್ಗೆ ಸಾಕ್ಷಾಧಾರಗಳೊಂದಿಗೆ ಸಾರ್ವಜನಿಕರೋರ್ವರು ಕರ್ನಾಟಕ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ದೂರು ನೀಡಿದ್ದರು. ಇದಕ್ಕೆ ಸ್ಪಂದನೆ ನೀಡಿದ ಪ್ರಧಾನ ಕಾರ್ಯದರ್ಶಿಯವರು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಪುತ್ತೂರು ತಾ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಸೂಚಿಸಿದ್ದರು.

ತಾ.ಪಂ. ಇಒ ಅವರು ಈ ಬಗ್ಗೆ ಗ್ರಾ.ಪಂ. ಪಿಡಿಒ ಅವರಿಗೆ ನೊಟೀಸ್ ನೀಡಿದ್ದು, ಇದಕ್ಕೆ ಸ್ವಚ್ಛತಾಗಾರ ಹುದ್ದೆಯ ಮಹಿಳಾ ಸಿಬ್ಬಂದಿಯು ''ತಾನು ಸ್ವಚ್ಛತಾ ಕೆಲಸ ನಿರ್ವಹಿಸುವುದರೊಂದಿಗೆ ಸ್ವ ಇಚ್ಛೆಯಿಂದ ಅಡುಗೆ ಕೆಲಸವನ್ನು ಬಿಡುವಿನ ಸಮಯದಲ್ಲಿ ನಿರ್ವಹಿಸುತ್ತಿದ್ದು, ತನಗೆ ಅಡುಗೆ ಕೆಲಸ ನಿರ್ವಹಿಸಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಯಾವುದೇ ಆದೇಶ ಅಥವಾ ಸೂಚನೆ ನೀಡಿರುವುದಿಲ್ಲ. ಇನ್ನು ಮುಂದೆ ಗ್ರಾ.ಪಂ. ಕಟ್ಟಡದಲ್ಲಿ ಅಡುಗೆ ಕೆಲಸ ನಿರ್ವಹಿಸುವುದಿಲ್ಲ ಹಾಗೂ ಇಂತಹ ತಪ್ಪುಗಳು ಮರುಕಳಿಸದಂತೆ ಕ್ರಮ ವಹಿಸುತ್ತೇನೆ'' ಎಂದು ಬರೆದು ಕೊಟ್ಟಿದ್ದರು. 

ಅದಾದ ಬಳಿಕ ಇದೀಗ 34 ನೆಕ್ಕಿಲಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ. ಅವರಿಗೆ ದ.ಕ. ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಎಚ್ಚರಿಕೆ ನೊಟೀಸ್ ನೀಡಿದ್ದು, ಗ್ರಾಮ ಪಂಚಾಯತ್‍ನಲ್ಲಿ ಇನ್ನು ಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News