ಕುಸ್ತಿ: 27 ವರ್ಷದ ಚಿನ್ನದ ಬರ ನೀಗಿಸಿದ ಸುನೀಲ್ ಕುಮಾರ್

Update: 2020-02-19 04:16 GMT

ಹೊಸದಿಲ್ಲಿ: ಭಾರತದ ಭರವಸೆಯ ಕುಸ್ತಿಪಟು ಸುನೀಲ್ ಕುಮಾರ್ ಅವರು 87 ಕೆ.ಜಿ. ವಿಭಾಗದ ಗ್ರೀಕೊ ರೋಮನ್ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ 27 ವರ್ಷಗಳ ಪ್ರಶಸ್ತಿ ಬರ ನೀಗಿಸಿದ್ದಾರೆ.

ಸೆಮಿಫೈನಲ್‌ನಲ್ಲಿ ಕಝಕಿಸ್ತಾನ್ ಸ್ಪರ್ಧಿಯ ವಿರುದ್ಧ 1-8 ಅಂಕಗಳ ಹಿನ್ನಡೆಯಿಂದ ಅದ್ಭುತವಾಗಿ ಚೇತರಿಸಿಕೊಂಡು 12-8 ಅಂಕಗಳಿಂದ ಗೆದ್ದು ಅಚ್ಚರಿ ಮೂಡಿಸಿದ್ದ ಭಾರತದ ಭರವಸೆಯ ತಾರೆ 21 ವರ್ಷದ ಸುನೀಲ್ ಕುಮಾರ್ ಫೈನಲ್‌ನಲ್ಲಿ 5-0 ಅಂಕಗಳ ಭರ್ಜರಿ ಜಯ ಸಾಧಿಸಿ ದೇಶ ಹೆಮ್ಮೆಪಡುವಂಥ ಸಾಧನೆ ಮಾಡಿದರು.

ಪಪ್ಪು ಯಾದವ್ 1993ರಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ ಗ್ರೀಕೋ ರೋಮನ್ ಶೈಲಿಯಲ್ಲಿ ಭಾರತ ಗೆದ್ದ ಮೊಟ್ಟಮೊದಲ ಚಿನ್ನದ ಪದಕ ಇದಾಗಿದೆ. "ಈ ಜಯ ಏಷ್ಯನ್ ಒಲಿಂಪಿಕ್ಸ್ ಅರ್ಹತಾ ಸುತ್ತಿಗೆ ಸ್ಫೂರ್ತಿ ನೀಡಿದೆ" ಎಂದು ಕುಮಾರ್ ಬಣ್ಣಿಸಿದರು.

ಇತ್ತೀಚಿನ ದಿನಗಳಲ್ಲಿ ಗ್ರೀಕೋ ರೋಮನ್ ಶೈಲಿಯಲ್ಲಿ ಭರವಸೆ ಮೂಡಿಸಿದ ಕುಮಾರ್ 2018 ಮತ್ತು 2019ರಲ್ಲಿ ಏಷ್ಯನ್ ಕೂಟದ 23 ವರ್ಷ ವಯೋಮಿತಿಯಲ್ಲಿ ಚಿನ್ನದ ಸಾಧನೆ ಮಾಡಿದ್ದರು. ರೋಮ್‌ನಲ್ಲಿ ನಡೆದ ವಿಶ್ವ ರ್ಯಾಂಕಿಂಗ್ ಸರಣಿಯಲ್ಲಿ ಬೆಳ್ಳಿ ಗೆದ್ದಿದ್ದರು. ಸೋನೆಪತ್ ಮೂಲದ ಈ ಕುಸ್ತಿಪಟುವಿನ ಬಗ್ಗೆ ಭಾರತ ಅಪಾರ ನಿರೀಕ್ಷೆ ಹೊಂದಿದೆ. ನಮ್ಮ ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿ ಅತ್ಯುತ್ತಮ ಸ್ಪರ್ಧಿ ಇವರು ಎಂದು ರಾಷ್ಟ್ರೀಯ ಕೋಚ್ ಹರಗೋವಿಂದ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News