ಕ್ರೀಡಾಪಟು’ ಪ್ರಶಸ್ತಿ ಹಂಚಿಕೊಂಡ ಮೆಸ್ಸಿ, ಹ್ಯಾಮಿಲ್ಟನ್

Update: 2020-02-19 04:54 GMT

ಬರ್ಲಿನ್, ಫೆ.18: ಬ್ರಿಟನ್‌ನ ಖ್ಯಾತ ಎಫ್-1 ಚಾಲಕ ಲೂವಿಸ್ ಹ್ಯಾಮಿಲ್ಟನ್ ಹಾಗೂ ವಿಶ್ವ ಶ್ರೇಷ್ಠ ಫುಟ್ಬಾಲ್ ಪಟು ಲಿಯೊನೆಲ್ ಮೆಸ್ಸಿ ಪ್ರತಿಷ್ಠಿತ ಲಾರಿಯಸ್ ವರ್ಷದ ವಿಶ್ವ ಕ್ರೀಡಾಪಟು ಪ್ರಶಸ್ತಿಯ ಜಂಟಿ ವಿಜೇತರೆಂದು ಘೋಷಿಸಲಾಗಿದೆ.

  ಈ ವರ್ಷದ 20ನೇ ಆವೃತ್ತಿಯ ಲಾರಿಯಸ್ ಪ್ರಶಸ್ತಿಗಾಗಿ ನಡೆದ ಮತದಾನದಲ್ಲಿ ಹ್ಯಾಮಿಲ್ಟನ್ ಹಾಗೂ ಮೆಸ್ಸಿ ಸಮಾನ ಮತಗಳನ್ನು ಪಡೆದಿದ್ದು, ಪ್ರಶಸ್ತಿಯ 20 ವರ್ಷಗಳ ಇತಿಹಾಸದಲ್ಲಿ ತೀರ್ಪುಗಾರರಿಗೆ ಹ್ಯಾಮಿಲ್ಟನ್ ಹಾಗೂ ಮೆಸ್ಸಿಯನ್ನು ಪ್ರತ್ಯೇಕಿಸಲು ಸಾಧ್ಯವಾಗಲಿಲ್ಲ. ಆರು ಬಾರಿ ಫಿಫಾ ವರ್ಷದ ಆಟಗಾರ ಪ್ರಶಸ್ತಿ ಜಯಿಸಿರುವ ಮೆಸ್ಸಿ ಲಾರಿಯಸ್ ಪ್ರಶಸ್ತಿಗೆ ಪಾತ್ರರಾದ ಮೊದಲ ಟೀಮ್-ಪ್ಲೇಯರ್ ಎನಿಸಿಕೊಂಡರು.

ಮೆಸ್ಸಿ ಅವರು ಗಾಲ್ಫ್ ದಿಗ್ಗಜ ಟೈಗರ್‌ವುಡ್ಸ್, ಕೀನ್ಯದ ಮ್ಯಾರಥಾನ್ ಓಟಗಾರ ಎಲಿಯುಡ್ ಕಿಪ್‌ಚೋಗ್, ಟೆನಿಸ್ ದಂತಕತೆ ರಫೆಲ್ ನಡಾಲ್ ಹಾಗೂ ಮೋಟೊ ಜಿಪಿ ಚಾಂಪಿಯನ್ ಮಾರ್ಕ್ ಮಾರ್ಕ್ವಿಝ್‌ರನ್ನು ಸ್ಪರ್ಧೆಯಲ್ಲಿ ಹಿಂದಿಕ್ಕಿದ್ದಾರೆ.

2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಐದು ಚಿನ್ನದ ಪದಕಗಳನ್ನು ಗೆದ್ದುಕೊಂಡಿರುವ ಅಮೆರಿಕದ ಜಿಮ್ನಾಸ್ಟ್ ಸಿಮೋನ್ ಬೈಲ್ಸ್ ವರ್ಷದ ವಿಶ್ವ ಮಹಿಳಾ ಕ್ರೀಡಾಪಟು ಪ್ರಶಸ್ತಿಯನ್ನು ಬಾಚಿಕೊಂಡರು. 2017 ಹಾಗೂ 2019ರಲ್ಲಿ ಪ್ರಶಸ್ತಿ ಜಯಿಸಿದ್ದ ಬೈಲ್ಸ್ ಇದೀಗ ನಾಲ್ಕು ವರ್ಷಗಳಲ್ಲಿ ಮೂರನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಸಿಮೋನ್ ಜಮೈಕಾದ ಶ್ರೇಷ್ಠ ಓಟಗಾರ್ತಿ ಶೆಲ್ಲಿ-ಆ್ಯನ್ ಫ್ರೆಸರ್-ಪ್ರೈಸ್‌ರ ಕಠಿಣ ಸವಾಲನ್ನು ಹಿಮ್ಮೆಟ್ಟಿಸಿದರು. ಪ್ರೈಸ್ ಐದನೇ ಬಾರಿ ಈ ಗೌರವದಿಂದ ವಂಚಿತರಾದರು. ಪ್ರೈಸ್ 2010, 2013, 2014 ಹಾಗೂ 2016ರಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. ಆದರೆ, ಪ್ರಶಸ್ತಿ ಗೆಲ್ಲಲಿಲ್ಲ. ಖ್ಯಾತ ಯುವ ಜಿಮ್ನಾಸ್ಟ್ ತಾರೆ ಸಿಮೋನ್ ಅವರು ಅಮೆರಿಕದ ಫುಟ್ಬಾಲ್ ತಾರೆ ಮೆಗಾನ್ ರಾಪಿನೊಯ್, ಜಪಾನ್‌ನ ಟೆನಿಸ್ ಸ್ಟಾರ್ ನವೋಮಿ ಒಸಾಕ, ಅಮೆರಿಕದ ಟ್ರಾಕ್ ಆ್ಯಂಡ್ ಫೀಲ್ಡ್ ಅಥ್ಲೀಟ್ ಅಲ್ಲಿಸನ್ ಫೆಲಿಕ್ಸ್ ಹಾಗೂ ಸ್ಕೈಯರ್ ಮೈಕಲ್ ಶಿಫ್ರಿನ್‌ರನ್ನು ಸ್ಪರ್ಧೆಯಲ್ಲಿ ಹಿಂದಿಕ್ಕಿದರು.

ಪ್ರಶಸ್ತಿ ಸಮಾರಂಭವನ್ನು ನಟ ಹ್ಯೂಗ್ ಗ್ರಾಂಟ್ ನಡೆಸಿಕೊಟ್ಟರು. ಇತ್ತೀಚೆಗೆ ವಿಮಾನ ಅಪಘಾತದಲ್ಲಿ ಮೃತಪಟ್ಟಿರುವ ಅಮೆರಿಕದ ಬಾಸ್ಕೆಟ್ ಬಾಲ್ ದಂತಕತೆ ಕೋಬಿ ಬ್ರಯಾಂಟ್‌ಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಸ್ನೋಬೋರ್ಡ್ ಸ್ಪರ್ಧೆಯಲ್ಲಿ ಮಿಂಚುತ್ತಿರುವ ಕ್ಲೋಯ್ ಕಿಮ್ ವಿಶ್ವದ ಆ್ಯಕ್ಷನ್ ಕ್ರೀಡಾಪಟು ಗೌರವ ಪಡೆದರು. ಸತತ ಎರಡನೇ ಬಾರಿ ಈ ವಿಭಾಗದಲ್ಲಿ ಪ್ರಶಸ್ತಿ ತನ್ನದಾಗಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News