ಖುದ್ದು ಹಾಜರಾಗಲು ಮಂಗಳೂರು ಪೊಲೀಸ್ ಕಮಿಷನರ್, ಡಿಸಿಪಿಗೆ ತನಿಖಾಧಿಕಾರಿ ನೋಟಿಸ್
ಮಂಗಳೂರು, ಫೆ.19: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ಕಳೆದ ಡಿ.19ರಂದು ಸಂಭವಿಸಿದ ಘರ್ಷಣೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ ಮತ್ತು ಡಿಸಿಪಿ ಅರುಣಾಂಶಗಿರಿ (ಕಾನೂನು ಮತ್ತು ಸುವ್ಯವಸ್ಥೆ) ಸಹಿತ 176 ಪೊಲೀಸ್ ಅಧಿಕಾರಿ-ಸಿಬ್ಬಂದಿಗೆ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿಯೂ ಆದ ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿ ಜಗದೀಶ್ ತಿಳಿಸಿದ್ದಾರೆ.
ಗೋಲಿಬಾರ್ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿ ನಗರದ ಮಿನಿ ವಿಧಾನಸೌಧದಲ್ಲಿರುವ ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತಾಲಯದ ನ್ಯಾಯಾಲಯದಲ್ಲಿ ಬುಧವಾರ ಮ್ಯಾಜಿಸ್ಟ್ರೀಯಲ್ ವಿಚಾರಣೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಪೊಲೀಸ್ ಇಲಾಖೆಯಿಂದ ನಿಯುಕ್ತರಾಗಿರುವ ನೋಡಲ್ ಅಧಿಕಾರಿ, ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಬೆಳ್ಳಿಯಪ್ಪ ಪ್ರಕರಣದ ಬಗ್ಗೆ ಸಾಕ್ಷ ಹೇಳಲು ಸಿದ್ಧರಿರುವ 176 ಪೊಲೀಸರ ಪಟ್ಟಿಯನ್ನು ನೀಡಿದ್ದಾರೆ. ಮುಂದಿನ ವಿಚಾರಣೆಯ ದಿನಾಂಕವನ್ನು ಫೆ.25ಕ್ಕೆ ನಿಗದಿಪಡಿಸಲಾಗಿದ್ದು, ಆ ದಿನ 176 ಮಂದಿಯ ಪೈಕಿ 12 ಮಂದಿ ಪೊಲೀಸ್ ಅಧಿಕಾರಿ-ಸಿಬ್ಬಂದಿಗೆ ಸಾಕ್ಷ ಹೇಳಲು ಅವಕಾಶ ನೀಡಲಾಗುವುದು. ಉಳಿದವರಿಗೆ ಹಂತ ಹಂತವಾಗಿ ಸಾಕ್ಷ ನೀಡಲು ಅವಕಾಶ ನೀಡಲಾಗುವುದು. ಮಂಗಳೂರು ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ ಮತ್ತು ಡಿಸಿಪಿ ಅರುಣಾಂಶಗಿರಿ ಅವರ ಹೆಸರು ಕೂಡ ಪಟ್ಟಿಯಲ್ಲಿವೆ. ಅವರು ಖದ್ದು ಹಾಜರಾಗಿ ಹೇಳಿಕೆ ನೀಡಲು ನೋಟಿಸ್ ಜಾರಿಗೊಳಿಸಲಾಗುವುದು ಎಂದು ಜಗದೀಶ್ ತಿಳಿಸಿದ್ದಾರೆ.
ಕಳೆದ ಡಿ.31ರಂದು ಘಟನೆ ನಡೆದ ಸ್ಥಳಗಳನ್ನು ಮಹಜರು ಮಾಡಲಾಗಿದೆ. ಜ.7, ಫೆ.6, ಫೆ.13ರಂದು ಸಾರ್ವಜನಿಕರ ಲಿಖಿತ ಸಾಕ್ಷ ಹೇಳಿಕೆ ಮತ್ತು ವೀಡಿಯೋ ದೃಶ್ಯಾವಳಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ 203 ಮಂದಿ ಸಾಕ್ಷ ನುಡಿದಿದ್ದರು. ಪೊಲೀಸರು 50 ವೀಡಿಯೋಗಳಿರುವ ಪೆನ್‌ಡ್ರೈವ್ ನೀಡಿದ್ದಾರೆ. ಸಾರ್ವಜನಿಕರು ಕೂಡ 1 ವೀಡಿಯೊ ಸಿಡಿ ನೀಡಿದ್ದಾರೆ. ಇಂದು ಮಾಜಿ ಮೇಯರ್ ಕೆ. ಅಶ್ರಫ್ ಲಿಖಿತ ಸಾಕ್ಷ ಹೇಳಿಕೆ ನೀಡಿದ್ದಾರೆ. ಇದರೊಂದಿಗೆ ಈವರೆಗೆ 204 ಸಾಕ್ಷಗಳು ದಾಖಲಿಸಿಕೊಳ್ಳಲಾಗಿದೆ ಎಂದು ಜಗದೀಶ್ ತಿಳಿಸಿದರು.
ರಾಜ್ಯ ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ಸಾರ್ವಜನಿಕರು ಅಥವಾ ಪೊಲೀಸರು ಖದ್ದು ಸೆರೆ ಹಿಡಿದ ವೀಡಿಯೋ ದೃಶ್ಯಾವಳಿಯನ್ನು ಮಾತ್ರ ಸ್ವೀಕರಿಸಲಾಗುತ್ತದೆ. ಸಿಸಿಟಿವಿಯ ದೃಶ್ಯಾವಳಿಯನ್ನೂ ನೀಡಬಹುದು. ಆದರೆ ಯಾವುದೇ ದೃಶ್ಯಾವಳಿಗಳು ಫಾರ್ವರ್ಡ್ ಆಗಿರಬಾರದು. ಯಾಕೆಂದರೆ ಅದರ ಮೂಲ ಎಲ್ಲಿಯದ್ದು ಎಂದು ಗುರುತು ಹಿಡಿಯಲಾಗದ ಕಾರಣ ಅದನ್ನು ತನಿಖೆಗೊಳಪಡಿಸಲು ಸಾಧ್ಯವಾಗದು ಎಂದು ಸ್ಪಷ್ಟಪಡಿಸಿದ ಜಗದೀಶ್ ಇಂದು ಅಶ್ರಫ್ ಫಾರ್ವರ್ಡ್ ಮಾಡಲಾದ ವೀಡಿಯೊವಿರುವ ಸಿಡಿಯನ್ನು ನೀಡಿದ್ದರು. ಅದನ್ನು ತನಿಖೆಗೊಳಪಡಿಸಲಾಗದ ಕಾರಣ ವಾಪಸ್ ನೀಡಲಾಗಿದೆ ಎಂದರು.
ಗಾಯಾಳು-ಜೈಲಿನಿಂದ ಬಿಡುಗಡೆಗೊಂಡವರಿಗೂ ಅವಕಾಶ: ಈ ಘಟನೆಯಲ್ಲಿ ಅನೇಕ ಮಂದಿ ಗಾಯಗೊಂಡು ಚಿಕಿತ್ಸೆ ಪಡೆದು ಇದೀಗ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅಲ್ಲದೆ ಜೈಲು ಸೇರಿದ್ದ ಹಲವರು ಇದೀಗ ಜಾಮೀನು ಪಡೆದು ಹೊರ ಬಂದಿದ್ದಾರೆ. ಹೀಗೆ ಗಾಯಾಳು ಮತ್ತು ಜೈಲಿನಿಂದ ಬಿಡುಗಡೆ ಗೊಂಡವರು ಕೂಡ ಮುಂದಿನ ವಿಚಾರಣೆಯ ದಿನಗಳಲ್ಲಿ ಖುದ್ದು ಹಾಜರಾಗಿ ಹೇಳಿಕೆ ನೀಡಬಹುದು ಎಂದು ಜಗದೀಶ್ ತಿಳಿಸಿದರು.
ಫೆ.24ಕ್ಕೆ ಹೈಕೋರ್ಟ್‌ಗೆ ಮಾಹಿತಿ: ಈವರೆಗೆ ಸಲ್ಲಿಕೆಯಾದ ಸಿಸಿ ಟಿವಿ ಫೂಟೇಜ್, ಮತ್ತು ವೀಡಿಯೋದ ಸಿಡಿಗಳ ಸಂಖ್ಯೆ, ಸಾಕ್ಷಗಳ ಹೇಳಿಕೆ ಇತ್ಯಾದಿಯ ಬಗ್ಗೆ ವಿವರವಾದ ಮಾಹಿತಿಯನ್ನು ಫೆ.24ರಂದು ಹೈಕೋರ್ಟ್‌ಗೆ ಸಲ್ಲಿಸಲಾಗುವುದು ಎಂದು ಜಗದೀಶ್ ನುಡಿದರು.
ಮಾರ್ಚ್ 23ಕ್ಕೆ ಹೈಕೋರ್ಟ್‌ಗೆ ಸಲ್ಲಿಕೆ: ಪ್ರಕರಣದ ತನಿಖಾ ವರದಿಯನ್ನು ಮಾ.23ಕ್ಕೆ ಸಲ್ಲಿಸಲು ಹೈಕೋರ್ಟ್ ನಿರ್ದೇಶಿಸಿದೆ. ಅದರಂತೆ ಆ ದಿನ ವರದಿ ಸಲ್ಲಿಸಲು ಪ್ರಯತ್ನಿಸಲಾಗುವುದು. ಅದರೊಳಗೆ ವರದಿ ಸಲ್ಲಿಸಲು ಆಗದಿದ್ದರೆ, ಮುಂದಿನ ಬೆಳವಣಿಗೆಯನ್ನು ಗಮನಿಸಿ ಕಾಲಾವಧಿಯನ್ನು ವಿಸ್ತರಿಸುವ ಬಗ್ಗೆ ಹೈಕೋರ್ಟ್‌ಗೆ ಮನವಿ ಮಾಡಿಕೊಳ್ಳಲಾಗುವುದು ಎಂದು ಪ್ರಶ್ನಯೊಂದಕ್ಕೆ ಉತ್ತರಿಸಿದರು.
ಮಾಜಿ ಮೇಯರ್ ಕೆ. ಅಶ್ರಫ್ ಹೇಳಿಕೆ
ಬುಧವಾರ ಪೂ.11ಕ್ಕೆ ಸಾಕ್ಷ ನೀಡಲು ಕಾಲವಕಾಶ ನೀಡಲಾಗಿದ್ದರೂ ಕೂಡ 12:40ರವರೆಗೆ ಯಾರೂ ಬಂದಿರಲಿಲ್ಲ. ಆ ಬಳಿಕ ಮಾಜಿ ಮೇಯರ್ ಕೆ. ಅಶ್ರಫ್ ಲಿಖಿತ ಹೇಳಿಕೆ ನೀಡಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಡಿ.19ರ ಘಟನೆಗೆ ನಾನು ಪ್ರತ್ಯಕ್ಷ ಸಾಕ್ಷಿಯಾಗಿದ್ದೇನೆ. ಪರಿಸ್ಥಿತಿ ಕೈ ಮೀರಿದಾಗ ಕಮಿಷನರ್ ಹರ್ಷ ಖುದ್ದು ನನ್ನನ್ನು ಘಟನೆ ನಡೆದ ಸ್ಥಳಕ್ಕೆ ಬರುವಂತೆ ಸೂಚಿಸಿದ್ದರು. ಅಲ್ಲದೆ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ವಿನಂತಿಸಿದ್ದರು. ಅದರಂತೆ ನಾನು ಸ್ಥಳಕ್ಕೆ ತೆರಳಿ ಜನರನ್ನು ಸಮಾಧಾನಪಡಿಸುತ್ತಿರುವಾಗಲೇ ನನ್ನ ಮೇಲೆ ದಾಳಿಯಾಗಿದೆ. ಗಾಯಗೊಂಡ ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಪಡೆದು ಮರಳಿ ಬಂದರೂ ಕೂಡ ಆ ದಿನದ ಕಹಿ ಘಟನೆ ಇನ್ನೂ ಮರೆತಿಲ್ಲ. ಈಗಾಗಲೆ ಪ್ರಕರಣದ ಬಗ್ಗೆ ಹೈಕೋರ್ಟ್ ಮೆಟ್ಟಲೇರಿದ್ದೇನೆ. ಇಂದು ಕೂಡ ಪೊಲೀಸ್ ಆಯುಕ್ತ ಡಾ. ಹರ್ಷ, ಡಿಸಿಪಿ ಅರುಣಾಂಶಿಗಿರಿ, ಇನ್‌ಸ್ಪೆಕ್ಟರ್‌ಗಳಾದ ಶಾಂತರಾಮ ಕುಂದರ್, ಮುಹಮ್ಮದ್ ಶರೀಫ್ ಮತ್ತಿತರ ಪೊಲೀಸರು ನಡೆಸಿದ ದೌರ್ಜನ್ಯವನ್ನು ಲಿಖಿತ ದೂರಿನಲ್ಲಿ ತಿಳಿಸಿದ್ದೇನೆ. ಘಟನೆಯ ಬಗ್ಗೆ ಡಿ.28ರಂದು ಬಂದರ್ ಠಾಣೆಗೆ ರಿಜಿಸ್ಟರ್ಡ್ ಅಂಚೆ ಮೂಲಕ ದೂರು ನೀಡಿದ್ದರೂ ಕೂಡಾ ಈವರೆಗೆ ಎಫ್‌ಐಆರ್ ದಾಖಲಾದ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ.
ಇಂದು 15 ಸಿಡಿಗಳನ್ನು ನೀಡಿದ್ದೆ. ಆದರೆ ಅದು ಫಾರ್ವರ್ಡ್ ದೃಶ್ಯಗಳ ವೀಡಿಯೋ ಸಿಡಿಗಳಾದ ಕಾರಣ ತನಿಖಾಧಿಕಾರಿ ಅದನ್ನು ಮರಳಿಸಿದ್ದಾರೆ. ಆದರೂ ಪೊಲೀಸರಿಂದ ನಮಗಾದ ಅನ್ಯಾಯದ ಬಗ್ಗೆ ಹೋರಾಟ ಮುಂದುವರಿಸಲಾಗುವುದು ಎಂದು ಅಶ್ರಫ್ ತಿಳಿಸಿದರು.