ದೇಶದ ಸುಸ್ಥಿರ ಅಭಿವೃದ್ಧಿಗೆ ಸಹಕಾರಿ ರಂಗ ಪ್ರಮುಖ ಸಾಧನವಾಗಿ ಪರಿಗಣಿಸಬೇಕು : ಸತೀಶ್ ಮರಾಠೆ

Update: 2020-02-19 09:38 GMT

ಮಂಗಳೂರು, ಫೆ.19: ದೇಶದ ಸುಸ್ಥಿರ ಅಭಿವೃದ್ಧಿಗೆ ಸಹಕಾರಿ ರಂಗ ಒಂದು ಪ್ರಮುಖ ಸಾಧನವೆಂದು ಪರಿಗಣಿಸಬೇಕಾಗಿದೆ ಎಂದು ಮುಂಬೈ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶಕ ಸತೀಶ್ ಮರಾಠೆ ತಿಳಿಸಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿಂದು ಮಂಗಳೂರು ವಿ.ವಿ.ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗ ಮತ್ತು ಅರ್ಥ ಶಾಸ್ತ್ರ ಸಂಘಟನೆಯ ವತಿಯಿಂದ ಹಮ್ಮಿಕೊಂಡ ಕಾರ್ಯಾಗಾರದಲ್ಲಿ ಭಾರತದ ಆರ್ಥಿಕ ಸಂಕ್ರಮಣ ಕಾಲದಲ್ಲಿ ಸಹಕಾರಿ ಕ್ಷೇತ್ರದ ಸವಾಲುಗಳು ಎಂಬ ವಿಷಯದ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದರು.

ಭಾರತದ ಕೃಷಿ ಕ್ಷೇತ್ರ ಭಾರತದ ಒಟ್ಟು ಜನಸಂಖ್ಯೆಯ ಮೂರನೆ ಎರಡು ಭಾಗದಷ್ಟು ಜನರಿಗೆ ಜೀವನಾಧಾರವಾಗಿದೆ. 57ಶೇ ಕಾರ್ಮಿಕರು ಕೃಷಿ ಕ್ಷೇತ್ರದಲ್ಲಿದ್ದಾರೆ. ಅಸಮರ್ಪಕ ವಾದ ದೇಶದ ಆರ್ಥಿಕ ನೀತಿಯಿಂದ ತಳಮಟ್ಟದಲ್ಲಿ  ಅಸಮಾನತೆ ಗೆ ಕಾರಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿ ಸಾಲ ಸೇರಿದಂತೆ ರೈತರ ನೆರವಿಗೆ ಸಹಕಾರ ಸಂಘಗಳು ನಿಂತವು. ದೇಶದಲ್ಲಿ 8.50ಲಕ್ಷ ಸಹಕಾರಿ ಸಂಘಗಳು 28 ಕೋಟಿ ಸದಸ್ಯರನ್ನು ಹೊಂದಿದ್ದು ಶೇ 75 ಗ್ರಾಮೀಣ ಭಾಗದ ರೈತರ ಬೇಡಿಕೆಗಳನ್ನು ಪೂರೈಸಲು ಶ್ರಮಿಸುತ್ತಿದೆ. ಕಳೆದ ಎರಡು ದಶಕಗಳಲ್ಲಿ ಸಹಕಾರಿ ಸಂಘಗಳು ಅತೀಯಾಗಿ ಸರಕಾರವನ್ನು ಅವಲಂಬಿಸ ತೊಡಗಿರುವುದರಿಂದ ಸಹಕಾರಿ ಸಂಘಗಳಲ್ಲಿ ರಾಜಕೀಯ ಹಸ್ತಕ್ಷೇಪ, ಅಧಿಕಾರಶಾಹಿ ಧೋರಣೆಗಳು  ಸಹಕಾರಿ ಕ್ಷೇತ್ರದ ನಕಾರಾತ್ಮಕ ಬೆಳವಣಿಗೆಗೆ ಕಾರಣವಾಗಿದೆ. ಪ್ರಪಂಚದ 100ದೇಶಗಳಲ್ಲಿ ಒಂದು ಶತಕೋಟಿ ಸಹಕಾರಿ ಗಳಿದ್ದಾರೆ. ಜಾಗತಿಕ ಬ್ಯಾಂಕ್ ಹಾಗೂ ಜಗತ್ತಿನ ವಿವಿಧ ದೇಶಗಳು ಸಹಕಾರಿ ರಂಗದ ಪ್ರಾಮುಖ್ಯತೆ ಯನ್ನು ಅರಿತು ಕೊಂಡಿದೆ. ಮಹಿಳೆಯರು, ಯುವಕರು ಸೇರಿದಂತೆ ವಿವಿಧ ವಲಯದ ಜನ ಸಹಭಾಗಿತ್ವದಲ್ಲಿ ಸಹಕಾರಿ ರಂಗ ಇನ್ನಷ್ಟು ಸಾಧನೆ ಮಾಡಲು ಸಾಧ್ಯ ಎಂದು ಸತೀಶ್ ಮರಾಠೆ ತಿಳಿಸಿದ್ದಾರೆ.

ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಎ.ಎಂ.ಖಾನ್, ಸಹಕಾರಿ ಭಾರತಿಯ ಪ್ರದಾನ ಕಾರ್ಯದರ್ಶಿ ಡಾ.ಉದಯ ವಾಸುದೇವ ಜೋಶಿ, ಕ್ಯಾಂಪ್ಕೋ ಅಧ್ಯಕ್ಷ ಸತೀಶ್ ಚಂದ್ರ, ಎಸ್ ಸಿ ಡಿ ಸಿ ಸಿ ಬ್ಯಾಂಕ್ ಸಿಇಒ ರವೀಂದ್ರ ಬಿ, ವಿಶ್ವ ಕರ್ಮ ಸಹಕಾರಿ ಸಂಘದ ಅಧ್ಯಕ್ಷ ಹರೀಶ್ ಆಚಾರ್, ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ.ಉದಯ ಕುಮಾರ್ ಇರ್ವತ್ತೂರು ಮೊದಲಾದ ವರು ಉಪಸ್ಥಿತರಿದ್ದರು.

ಸಂಘಟನಾ ಕಾರ್ಯದರ್ಶಿ ಜಯವಂತ ನಾಯಕ್ ಸ್ವಾಗತಿಸಿದರು, ಉಪನ್ಯಾಸಕಿ ಶಮಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News