ಮಲೇಷ್ಯಾ ವಿಮಾನ ನಾಪತ್ತೆ: ಪೈಲಟ್ ಬಗ್ಗೆ ಆಸ್ಟ್ರೇಲಿಯಾ ಮಾಜಿ ಪ್ರಧಾನಿಯ ಗಂಭೀರ ಆರೋಪ

Update: 2020-02-19 11:32 GMT

ಸಿಡ್ನಿ: ನಾಪತ್ತೆಯಾಗಿರುವ ಮಲೇಷ್ಯಾದ ಎಂಎಚ್370  ವಿಮಾನವನ್ನು 'ಸಾಮೂಹಿಕ ಕೊಲೆ-ಆತ್ಮಹತ್ಯೆ' ನಡೆಸುವ ಉದ್ದೇಶದಿಂದ ಅದರ ಪೈಲಟ್ ಉದ್ದೇಶಪೂರ್ವಕವಾಗಿ  ಪತನಗೊಳಿಸಿದ್ದಾರೆಂದು ಮಲೇಷ್ಯಾದ ಅತ್ಯಂತ ಉನ್ನತ ಅಧಿಕಾರಿಗಳು ನಂಬಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಟೋನಿ ಎಬ್ಬೊಟ್ ಹೇಳಿದ್ದಾರೆ.

ಒಟ್ಟು 239 ಮಂದಿಯಿದ್ದ  ಮಲೇಷ್ಯಾ ಏರ್‍ ಲೈನ್ಸ್‍ ಗೆ ಸೇರಿದ್ದ ವಿಮಾನವು ಕೌಲಾಲಂಪುರದಿಂದ ಬೀಜಿಂಗ್‍ ಗೆ ಹೋಗುವ ಹಾದಿಯಲ್ಲಿ  ನಾಪತ್ತೆಯಾಗಿತ್ತು. ಜಗತ್ತಿನ ವಾಯುಯಾನ ಇತಿಹಾಸದಲ್ಲಿಯೇ ಈ ವಿಮಾನದ ಅವಶೇಷಗಳಿಗಾಗಿ ಅತ್ಯಂತ ಬೃಹತ್ ಶೋಧ ಕಾರ್ಯಾಚರಣೆ ನಡೆದರೂ ಪ್ರಯೋಜನವಾಗದೆ ಕೊನೆಗೆ ಜನವರಿ 2017ರಲ್ಲಿ  ಶೋಧ ಕಾರ್ಯಾಚರಣೆಯನ್ನು ಕೈಬಿಡಲಾಗಿತ್ತು.

ಸ್ಕೈ ನ್ಯೂಸ್ ಸಾಕ್ಷ್ಯಚಿತ್ರವೊಂದರಲ್ಲಿ ಮಾತನಾಡಿದ್ದ ಟೋನಿ ಎಬ್ಬೋಟ್, ಘಟನೆ ನಡೆದ ವಾರದಲ್ಲಿಯೇ  ವಿಮಾನದ ಪೈಲಟ್ ಉದ್ದೇಶಪೂರ್ವಕವಾಗಿ ವಿಮಾನವನ್ನು  ಪತನಗೊಳಿಸಿರಬೇಕೆಂದು ತಮಗೆ ಹೇಳಲಾಗಿತ್ತು ಎಂದು ಬಹಿರಂಗಪಡಿಸಿದ್ದಾರೆ. "ಯಾರು ಹೇಳಿದ್ದರು ಎಂಬ ವಿಚಾರದ ಬಗ್ಗೆ ನಾನು ಏನೂ ಹೇಳುವುದಿಲ್ಲ'' ಎಂದೂ ಅವರು ಹೇಳಿಕೊಂಡಿದ್ದಾರೆ.

ಆದರೆ ವಿಮಾನದ ಪೈಲಟ್ ಆಗಿದ್ದ ಝಹರೀ ಅಹ್ಮದ್ ಶಾ ಕುಟುಂಬ ಮಾತ್ರ ಈ ಮಾತುಗಳನ್ನು ಆಧಾರರಹಿತ ಎಂದು ಹೇಳಿದೆ. ಮಲೇಷ್ಯಾ ನಾಗರಿಕ ವಿಮಾನಯಾನ ಸಂಸ್ಥೆಯ ಮಾಜಿ ಮುಖ್ಯಸ್ಥ, ಘಟನೆ ನಡೆದಾಗ ಅಧಿಕಾರದಲ್ಲಿದ್ದ ಅಝರುದ್ದೀನ್ ಅಬ್ದುರ್ರಹ್ಮಾನ್ ಕೂಡ ಆಸ್ಟ್ರೇಲಿಯಾದ ಮಾಜಿ  ಪ್ರಧಾನಿಯ ಹೇಳಿಕೆಯನ್ನು ಖಂಡಿಸಿ

ಅದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ ಎಂದಿದಾರೆ. ಈ ವಿಮಾನದಲ್ಲಿದ್ದ ಪ್ರಯಾಣಿಕರ ಪೈಕಿ ನಾಲ್ವರು ಆಸ್ಟ್ರೇಲಿಯನ್ನರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News