ಛತ್ರಪತಿ ಶಿವಾಜಿಯ 393ನೇ ಜಯಂತಿ ಆಚರಣೆ

Update: 2020-02-19 12:08 GMT

ಮಂಗಳೂರು, ಫೆ.19: ದ.ಕ.ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಮಂಗಳೂರು, ಆರ್ಯ ಯಾನೆ ಮರಾಠ ಸಮಾಜ ಸಂಘ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 393ನೇ ಜಯಂತಿ ಆಚರಣೆಯ ಕಾರ್ಯಕ್ರಮವು ಬುಧವಾರ ನಗರದ ಎನ್‌ಜಿಒ ಹಾಲ್‌ನಲ್ಲಿ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ದಯಾನಂದ್ ಕತ್ತಲ್‌ಸಾರ್ ಸಮಾಜಕ್ಕೆ ಬೆಳಕು ನೀಡಿದಂತಹ ಶಿವಾಜಿಯ ತತ್ವಗಳು ಪ್ರತಿಯೊಬ್ಬರ ಮನಸ್ಸಿನಲ್ಲಿ ಅರಳಿದಾಗ ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿಯ ಕಿಚ್ಚು ಮೊಳಕೆಯೊಡೆಯುತ್ತದೆ ಎಂದರು.

ದೇವರು ಒಂದೊಂದು ಯುಗದಲ್ಲಿ ಒಂದೊಂದು ಅವತಾರ ಪುರುಷರಾಗಿ ಬಂದು ಸುಧಾರಣೆ ಮಾಡಿದರು. ಇದೇ ರೀತಿಯಲ್ಲಿ ಕಲಿಯುಗದಲ್ಲಿ ಶಿವಾಜಿ ಬಂದು ಸಮಾಜದ ಉದ್ಧಾರ ಮಾಡಿದರು. ರಾಷ್ಟ್ರಪ್ರೇಮ, ರಾಷ್ಟ್ರ ಕಟ್ಟುವ ಕೆಲಸದಲ್ಲಿ ಶಿವಾಜಿಯ ಸಾಧನೆ ವಿಶೇಷವಾಗಿದೆ ಎಂದು ದಯಾನಂದ ಕತ್ತಲ್‌ಸಾರ್ ನುಡಿದರು.

ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿವಾಜಿ ಕುರಿತು ಶಿಕ್ಷಕ ರವೀಂದ್ರನಾಥ ಶೆಟ್ಟಿ ಮಾತನಾಡಿದರು. ಈ ಸಂದರ್ಭ ಮರಾಠ ಸಮಾಜದ ನಾನಾ ಬೇಡಿಕೆಗಳ ಮನವಿ ಪತ್ರವನ್ನು ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭ ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್‌ನ ಮಂಗಳೂರು ಅಧ್ಯಕ್ಷ ಎ.ವಿ. ಸುರೇಶ್ ರಾವ್ ಕರ್‌ಮೋರೆ, ಆರ್ಯ ಯಾನೆ ಮರಾಠ ಸಮಾಜ ಸಂಘದ ಮಂಗಳೂರು ಅಧ್ಯಕ್ಷ ಯತೀಂದ್ರ ಎ. ಬಹುಮಾನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ., ನೂತನ ಕಾರ್ಪೊರೇಟರ್‌ಗಳಾದ ದಿವಾಕರ ಪಾಂಡೇಶ್ವರ್, ವೀಣಾ ಮಂಗಳಾ, ರಾಮಕ್ಷತೀಯ ಸಂಘದ ಜೆ.ಕೆ. ರಾವ್, ಪರಿಷತ್‌ನ ನಾಗೇಶ್ ಎನ್. ಪಂಡಿತ್, ಮಾಧವ ರಾವ್, ಪರಿಷತ್‌ನ ಚಂದ್ರಶೇಖರ್ ಚಂದ್ರಮಾನ್ ಹಾಗೂ ಮರಾಠ ಸಮಾಜದ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News