'ಬಿಜೆಪಿ ಹಠಾವೋ, ದೇಶ್ ಬಚಾವೋ' ಹೋರಾಟ ಅಗತ್ಯ : ಸುಧೀರ್ ಕುಮಾರ್ ಮುರೊಳ್ಳಿ

Update: 2020-02-19 14:43 GMT
ಭವ್ಯ ನರಸಿಂಹಮೂರ್ತಿ ಮಾತನಾಡುತ್ತಿರುವುದು

ಬೈಂದೂರು, ಫೆ.19: ವಿವಿಧ ಧರ್ಮೀಯರು ಒಂದಾಗಿದ್ದರೆ ತಮ್ಮ ರಾಜಕಾರಣ ನಡೆಯಲ್ಲ ಎಂಬ ಕಾರಣಕ್ಕೆ ಮೋದಿ, ಅಮಿತ್ ಶಾ, ಸಿಎಎ, ಎನ್‌ಆರ್‌ಸಿ ಮೂಲಕ ನಮ್ಮನ್ನು ವಿಭಜನೆ ಮಾಡುವ ಕೆಲಸಕ್ಕೆ ಕೈಹಾಕಿದ್ದಾರೆ. ಬ್ರಿಟೀಷರ ಒಡೆದು ಆಳುವ ನೀತಿಯನ್ನು ಮುಂದುವರೆಸುತ್ತಿರುವ ಸಂಘ ಪರಿವಾರ, ಬಿಜೆಪಿ ಹಠಾವೋ ದೇಶ್ ಬಚಾವೋ ಹೋರಾಟ ಮಾಡಬೇಕಾಗಿದೆ. ಈ ದೇಶಕ್ಕೆ ಸಂಕಷ್ಟ ಬಂದಾಗ ಹಿಂದೂ ಮುಸ್ಲಿಮರು ಒಂದಾಗಿ ಹೋರಾಟ ಮಾಡಬೇಕು ಎಂದು ಸಾಮಾಜಿಕ ಹೋರಾಟಗಾರ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದ್ದಾರೆ.

ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿ ಹೋರಾಟ ಸಮಿತಿ ಕುಂದಾಪುರ ಇದರ ನೇತೃತ್ವದಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಕರಾಳ ಕಾಯ್ದೆಗಳಾದ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರೋಧಿಸಿ ನಾವುಂದ ವಿನಾಯಕ ಹೊಟೇಲ್ ಎದುರು ಬುಧವಾರ ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ದೇಶದ ನಿಜವಾದ ಸಮಸ್ಯೆ ಎಂಬ ನೋವುಗಳನ್ನು ಮರೆಯುವುದಕ್ಕಾಗಿ ಮೋದಿ, ಅಮಿತ್ ಶಾ, ಈ ದೇಶದ ಜನತೆಗೆ ಎನ್‌ಆರ್‌ಸಿ ಎಂಬ ಪೈನ್‌ಕ್ಲಿಲ್ಲರ್ ಕೊಡುತ್ತಿದ್ದಾರೆ. ದೇಶದ ಜನರನ್ನು ಒಗ್ಗೂಡಿಸಿರುವುದು ನಮ್ಮ ಸಂವಿಧಾನ. ಆದರೆ ಈ ಸಂವಿಧಾನದಲ್ಲಿ ಎಲ್ಲೂ ಧರ್ಮದ ಆಧಾರದಲ್ಲಿ ಪೌರತ್ವ ಕೊಡಿ ಎಂದು ಹೇಳಿಲ್ಲ. ಈಗ ಇವರು ಸಂವಿಧಾನದ ಈ ವಿಚಾರಧಾರೆಯ ವಿರುದ್ಧವಾಗಿ ಒಂದು ಧರ್ಮವನ್ನು ಬಿಟ್ಟು ಪೌರತ್ವ ಕೊಡಲು ಮುಂದಾಗಿದ್ದಾರೆ. ಇದರ ವಿರುದ್ಧ ನಮ್ಮ ಹೋರಾಟ ಎಂದರು.

ದೇಶ ಕಟ್ಟುವ ಕೆಲಸ ಮಾಡುವುದೇ ನಿಜವಾದ ದೇಶಭಕ್ತಿಯಾಗಿದೆ. ದೆಹಲಿ ಫಲಿತಾಂಶವು ಎನ್‌ಆರ್‌ಸಿ ವಿರುದ್ಧದ ಹೋರಾಟಕ್ಕೆ ಸಿಕ್ಕಿದ ಬೆಲೆಯಾಗಿದೆ. ಈ ದೇಶದ ದೊಡ್ಡ ಸಮಸ್ಯೆಯೇ ಬಿಜೆಪಿ ಮತ್ತು ಸಂಘಪರಿವಾರ. ಮುಂದೆ ಇವರ ವಿರುದ್ಧ ಎಲ್ಲ ಸಮುದಾಯವರು ಹಂತ ಹಂತವಾಗಿ ತಿರುಗಿ ಬೀಳುವ ಸಮಯ ಬರಲಿದೆ ಎಂದು ಅವರು ಹೇಳಿದರು.

ಮಾನವ ಹಕ್ಕುಗಳ ಹೋರಾಟಗಾರ, ಧರ್ಮಗುರು ಫಾ.ವಿಲಿಯಂ ಮಾರ್ಟಿಸ್ ಮಾತನಾಡಿ, ಪೌರತ್ವ ಸಾಬೀತುಪಡಿಸಲು ಯಾವ ದಾಖಲೆ ಸಲ್ಲಿಸಬೇಕೆಂಬ ಸ್ಪಷ್ಟತೆ ಗೃಹ ಸಚಿವರಿಗೆ ಹಾಗೂ ಅಧಿಕಾರಿಗಳಿಗೆಯೇ ಇಲ್ಲ. ಹೀಗೆ ಗೊಂದಲದಿಂದ ಕೂಡಿರುವ ಈ ಕಾಯ್ದೆಗಳನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ. ಇದರಿಂದ ಮುಸ್ಲಿಮರಿಗೆ ಮಾತ್ರ ಅಲ್ಲ ಎಲ್ಲರಿಗೂ ಸಂಕಟ ಎದುರಾಗಲಿದೆ. ಇದರಿಂದ ಶೇ.40ರಷ್ಟು ಹಿಂದೂಗಳು ಹೊರಗೆ ಉಳಿಯುವ ಅಪಾಯ ಇದೆ ಎಂದರು.

ಯುವ ಚಿಂತಕಿ ಭವ್ಯ ನರಸಿಂಹಮೂರ್ತಿ, ಸಾಮಾಜಿಕ ಹೋರಾಟಗಾರ ಮುನೀರ್ ಜನ್ಸಾಲೆ, ಕರ್ನಾಟಕ ಎಸ್ಸೆಸ್ಸೆಫ್ ಕಾರ್ಯದರ್ಶಿ ಕೆ.ಪಿ.ಸಿರಾಜುದ್ದೀನ್ ಸಖಾಫಿ, ಡಿವೈಎಫ್‌ಐ ಕುಂದಾಪುರ ಅಧ್ಯಕ್ಷ ರಾಜೇಶ ವಡೇರಹೋಬಳಿ, ವಾಗ್ಮಿ ನಜ್ಮಾ ನಝೀರ್ ಚಿಕ್ಕನೇರಳೆ, ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ಉಪಾಧ್ಯಕ್ಷ ಮುಫ್ತಿ ಮುಅಝಮ್ ಮೌಲಾನ ಮಾತನಾಡಿದರು.

ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಬೈಂದೂರು ತಾಲೂಕು ದಸಂಸ ಸಂಚಾಲಕ ಮಂಜುನಾಥ ಹಳಗೇರಿ, ಹೋರಾಟ ಸಮಿತಿಯ ಗೌರವಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ನಾವುಂದ ಜುಮಾ ಮಸೀದಿ ಅಧ್ಯಕ್ಷ ತೌಫೀಕ್ ಅಬ್ದುಲ್ಲಾ, ಉಪಾಧ್ಯಕ್ಷ ಮನ್ಸೂರು ಮರವಂತೆ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್, ಯೂತ್ ಕಾಂಗ್ರೆಸ್‌ನ ಶೇಖರ್ ಪೂಜಾರಿ, ನಾವುಂದ ಗ್ರಾಪಂ ಅಧ್ಯಕ್ಷ ನರಸಿಂಹ ದೇವಾಡಿಗ, ನ್ಯಾಯವಾದಿ ಇಲ್ಯಾಸ್, ಬೈಂದೂರು ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಹಸನ್ ಮಾವಡ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಆಸೀಫ್ ಕೋಟೇಶ್ವರ, ಮುಹಮ್ಮದ್ ರಫೀಕ್, ಅಬು ಮುಹ್ಮಮದ್, ಮೊದಲಾದವರು ಉಪಸ್ಥಿತರಿದ್ದರು.

ಹೋರಾಟ ಸಮಿತಿಯ ಅಧ್ಯಕ್ಷ ಶಶಿಧರ ಹೆಮ್ಮಾಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ರಾಮಕೃಷ್ಣ ಹೇರ್ಳೆ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರೋಧಿಸುವ ಪ್ರತಿಜ್ಞಾ ವಿಧಿ ಬೋಧಿಸಿದರು. ಇಕ್ಬಾಲ್ ಕಾರ್ಯಕ್ರಮ ನಿರೂಪಿಸಿದರು. ಆಸೀಂ ಕುಂದಾಪುರ ವಂದಿಸಿದರು.

ದೇಶದಲ್ಲಿ 15 ನಿಮಿಷಕ್ಕೊಮ್ಮೆ ಒಂದು ಮಹಿಳೆ ಮೇಲೆ ಅತ್ಯಾಚಾರ, ಒಂದು ಗಂಟೆಯಲ್ಲಿ 40 ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದರ ಬಗ್ಗೆ ಗಮನ ಕೊಡಬೇಕಾದ ಸರಕಾರ, ಸಿಎಎ ಎನ್‌ಆರ್‌ಸಿ ಬಗ್ಗೆ ತಲೆಕೆಡಿಸಿ ಕೊಳ್ಳುತ್ತಿದೆ. ಸ್ವಾತಂತ್ರ್ಯ ಬಂದ ನಂತರ ಈ ದೇಶದಲ್ಲಿ ಯಾರು ಕೂಡ ಸಾರ್ವ ಜನಿಕವಾಗಿ ಗನ್ ಮೂಲಕ ಗುಂಡು ಹಾರಿಸಿಲ್ಲ. ಇಂದು ದೇಶ ಆ ಮಟ್ಟಕ್ಕೂ ಬಂದಿದೆ. ಆದುದರಿಂದ ಮೋದಿ ಆಡಳಿತದಲ್ಲಿ ಯಾರು ಕೂಡ ಸುರಕ್ಷಿತವಾಗಿಲ್ಲ ಎಂದು ಯುವ ಚಿಂತಕಿ ಭವ್ಯ ನರಸಿಂಹಮೂರ್ತಿ ಟೀಕಿಸಿದರು.

ಜನಗಣತಿಗೂ ಎನ್‌ಪಿಆರ್‌ಗೂ ಸಾಕಷ್ಟು ವ್ಯಾತ್ಯಾಸ ಇದೆ. 10 ವರ್ಷಗಳಿಗೊಮ್ಮೆ ನಡೆಸುವ ಜನಗಣತಿಯಲ್ಲಿ ಯಾರ ವೈಯಕ್ತಿಕ ಮಾಹಿತಿ ಕೂಡ ಇರುವುದಿಲ್ಲ. ಆದರೆ ಎನ್‌ಪಿಆರ್ ಮೂಲಕ ಪ್ರತಿಯೊಬ್ಬರ ಡೇಟಾವನ್ನು ತಿಳಿದುಕೊಳ್ಳಲಿದೆ. ಎನ್‌ಪಿಆರ್ ಮೂಲಕ ಶೇ.80ರಷ್ಟು ಎನ್‌ಆರ್‌ಸಿ ಕೆಲಸ ಮುಗಿಸಲಾಗುತ್ತದೆ. ಎನ್‌ಪಿಆರ್‌ನಲ್ಲಿ ಸಂಶಯ ಇದ್ದವರ ಪಟ್ಟಿ ಮಾಡಿ, ಪೌರತ್ವ ಸಾಬೀತುಪಡಿಸುವಂತೆ ಸರಕಾರ ದಾಖಲೆಗಳನ್ನು ಕೇಳಲಿದೆ. ಆದುದರಿಂದ ಎನ್‌ಆರ್‌ಸಿಗಿಂತಲೂ ಎನ್‌ಪಿಆರ್ ಬಹಳ ಅಪಾಯಕಾರಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News