ಜರೀಗಿಡಗಳಿಗೆ ಮಲೀನ ವಾತಾವರಣ ಶುದ್ಧೀಕರಿಸುವ ಸಾಮರ್ಥ್ಯ: ಡಾ.ರಾಜಗೋಪಾಲ್

Update: 2020-02-19 15:04 GMT

ಉಡುಪಿ, ಫೆ.19: ಈವರೆಗೆ ಜಗತ್ತಿನಲ್ಲಿ 13ಸಾವಿರ ಮತ್ತು ಕರ್ನಾಟಕದಲ್ಲಿ 200 ಪ್ರಬೇಧಗಳ ಜರೀಗಿಡಗಳನ್ನು ಗುರುತಿಸಲಾಗಿದೆ. ಮಲೀನ ವಾತಾವರಣ ವನ್ನು ಶುದ್ದೀಕರಿಸುವ ಸಾಮರ್ಥ್ಯವನ್ನು ಹೊಂದಿರುವ ಈ ಗಿಡಗಳ ಬಗ್ಗೆ ಹೆಚ್ಚಿನ ಸಂಶೋಧನೆಗಳನ್ನು ನಡೆಸಬೇಕಾಗಿದೆ ಎಂದು ಉಡುಪಿ ಎಂಜಿಎಂ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಹಾಗೂ ಪ್ರೊಫೆಸರ್ ಡಾ.ಪಿ.ಕೆ. ರಾಜಗೋಪಾಲ್ ತಿಳಿಸಿದ್ದಾರೆ.

ಉಡುಪಿ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ಬುಧವಾರ ಕಾಲೇಜಿನ ಮಿನಿ ಆಡಿಟೋರಿಯಂನಲ್ಲಿ ಆಯೋಜಿಸಲಾದ ಜರೀಗಿಡಗಳ ಗುರುತಿಸುವಿಕೆಯ ತಂತ್ರ ಕುರಿತ ರಾಜ್ಯ ಮಟ್ಟದ ಕಾರ್ಯಾಗಾರ ಮತ್ತು ಜರೀಗಿಡಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತಿದ್ದರು.

ಝರಿಗಳಲ್ಲಿ, ಜಲಪಾತಗಳ ಸಮೀಪದಲ್ಲಿ ಸಮೃದ್ಧವಾಗಿ ಬೆಳೆಯುವ ಈ ಗಿಡಗಳಿಗೆ ಜರೀ ಎಂಬ ಹೆಸರು ಬಂದಿದೆ. ಮಳೆಕಾಡು ಹಾಗೂ ನಿತ್ಯ ಹರಿಧ್ವರ್ಣದ ಕಾಡುಗಳಲ್ಲಿ ಸಮೃದ್ಧವಾಗಿ ಬೆಳೆಯುತ್ತವೆ. ಇದರ ಬೆಳವಣಿಗೆಗೆ ತಂಪು ಸ್ಥಳ ಹಾಗೂ ಸಾಕಷ್ಟು ನೆರಳು ಬೇಕಾಗುತ್ತದೆ. ವಾತಾವರಣದ ತೇವಾಂಶ ಇರುವ ಪ್ರದೇಶಗಳಲ್ಲಿ ಇದು ಹೇರಳವಾಗಿ ಕಂಡುಬರುತ್ತದೆ. ಮುಖ್ಯವಾಗಿ ಬಾವಿಯೊಳಗೆ ಹೆಚ್ಚಾಗಿ ಕಾಣಸಿಗುತ್ತದೆ ಎಂದರು.

ಜರೀಗಿಡಗಳು ಐದರಿಂದ 15ನೇ ಶತಮಾನದವರಗೆ ಔಷಧಿಯಾಗಿ ಬಳಕೆ ಮಾಡುತ್ತಿರುವುದು ತಿಳಿದುಬರುತ್ತದೆ. ಜಗತ್ತಿನಲ್ಲಿ ಬುಡಕಟ್ಟು ಜನಾಂಗದವರು ಸುಮಾರು 220 ಪ್ರಬೇಧದ ಜರೀಗಿಡಗಳನ್ನು ಔಷಧಿಯಾಗಿ ಉಪಯೋಗಿ ಸುತ್ತಿದ್ದಾರೆ. ಭಾರತದಲ್ಲಿ 27 ಪ್ರಬೇಧದ ಗಿಡಗಳನ್ನು ಆಹಾರವಾಗಿ ಬುಡಕಟ್ಟು ಜನಾಂಗದವರು ಬಳಸುತ್ತಿದ್ದಾರೆ. ಜೈವಿಕ ಗೊಬ್ಬರವಾಗಿಯೂ ಈ ಗಿಡಗಳನ್ನು ಬಳಕೆ ಮಾಡಲಾುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಅದಮಾರು ಮಠ ಎಜ್ಯುಕೇಶನ್ ಕೌನ್ಸಿಲ್‌ನ ಅಧ್ಯಕ್ಷ ಶ್ರೀವಿಶ್ವಪ್ರಿಯತೀರ್ಥ ಸ್ವಾಮೀಜಿ ಮಾತನಾಡಿ, ಪ್ರಾಚೀನ ಕಾಲದಿಂದ ಈ ಜರೀಗಿಡಗಳನ್ನು ಗಿಡಮೂಲಿಕೆಯಾಗಿ ಬಳಸುತ್ತಿರುವ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ. ಆದುದರಿಂದ ಇದರ ಮೂಲ ತಿಳಿದುಕೊಳ್ಳುವುದರ ಜೊತೆಗೆ ಅದರ ಉಪಯೋಗಗಳ ಕುರಿತು ಹೆಚ್ಚಿನ ಅಧ್ಯಯನವನ್ನು ವಿದ್ಯಾರ್ಥಿ ಗಳು ಮಾಡಬೇಕು ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಕಾಲೇಜಿನ ಗೌರವ ಕಾರ್ಯದರ್ಶಿ ಡಾ.ಜಿ.ಎಸ್. ಚಂದ್ರಶೇಖರ್ ಮಾತನಾಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಾಲ ಡಾ.ರಾಘವೇಂದ್ರ ಎ. ವಹಿಸಿದ್ದರು.

ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ವಿಜಯಲಕ್ಷ್ಮೀ ಸಿ.ಭಟ್ ಸ್ವಾಗತಿಸಿದರು. ಉಪನ್ಯಾಸಕಿ ಸುಮಂಗಳ ಶೆಟ್ಟಿ ವಂದಿಸಿದರು. ವಿದ್ಯಾರ್ಥಿನಿಯರಾದ ಮೌಲ್ಯ ಹಾಗೂ ಪ್ರಾರ್ಥನಾ ಕಾರ್ಯಕ್ರಮ ನಿರೂಪಿಸಿದರು. ಜರೀ ಗಿಡಗಳ ಪ್ರದರ್ಶನದಲ್ಲಿ ಸುಮಾರು 23 ಪ್ರಬೇಧಗಳ ಗಿಡಗಳು ಮತ್ತು ಅದರ ಕುರಿತ ಮಾಹಿತಿಯನ್ನು ತಿಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News