ಮಂಗಳೂರು: ವಿವಿಧ ಬೇಡಿಕೆಗೆ ಆಗ್ರಹಿಸಿ ನಿವೃತ್ತ ಬ್ಯಾಂಕ್ ನೌಕರರ ಧರಣಿ

Update: 2020-02-19 16:36 GMT

ಮಂಗಳೂರು, ಫೆ.19: ಪಿಂಚಣಿ ಪರಿಷ್ಕರಣೆ ಹಾಗೂ ಕುಟುಂಬ ಪಿಂಚಣಿ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಬಲ್ಮಠ ಸಮೀಪದ ಕೆನರಾ ಬ್ಯಾಂಕ್‌ನ ವೃತ್ತ ಕಚೇರಿ ಮುಂಭಾಗ ಬುಧವಾರ ಸಂಜೆ ಅಖಿಲ ಭಾರತೀಯ ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತ ನೌಕರರ ಒಕ್ಕೂಟದ (ಎಐಬಿಪಿಎಆರ್‌ಸಿ) ದ.ಕ. ಜಿಲ್ಲಾ ಘಟಕವು ಧರಣಿ ನಡೆಸಿತು.

ಧರಣಿನಿರತರನ್ನು ಉದ್ದೇಶಿಸಿ ಮಾತನಾಡಿದ ಎಐಬಿಪಿಎಆರ್‌ಸಿ ರಾಜ್ಯ ಘಟಕದ ಕಾರ್ಯದರ್ಶಿ ಎ.ಎನ್. ಕೃಷ್ಣಮೂರ್ತಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ 1995ರಲ್ಲಿ ಪಿಂಚಣಿ ನೀಡಲು ಆರಂಭಿಸಲಾಯಿತು. ಕಳೆದ 25 ವರ್ಷಗಳ ಹಿಂದೆ ನಿಗದಿಪಡಿಸಲಾದ ಪಿಂಚಣಿಯನ್ನೇ ಮುಂದುವರಿಸಲಾಗಿದೆ. ಪಿಂಚಣಿ ಪರಿಷ್ಕರಣೆ ಮಾಡಬೇಕೆನ್ನುವ ನಿಯಮಕ್ಕೆ ತಿಲಾಂಜಲಿ ಇಡಲಾಗಿದೆ. ಭಾರತೀಯ ಬ್ಯಾಂಕ್‌ಗಳ ಸಂಘ (ಐಬಿಎ) ಹಾಗೂ ಕೇಂದ್ರ ಸರಕಾರವು ಕೂಡಲೇ ಪಿಂಚಣಿ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಎಐಬಿಪಿಎಆರ್‌ಸಿ ಸಮಿತಿಯ ಸದಸ್ಯ ಬಿ.ವಿ.ಪೈ ಮಾತನಾಡಿ, ಬ್ಯಾಂಕ್‌ಗಳ ಒಕ್ಕೂಟ ಸಹಿತ ಕೇಂದ್ರ ಸರಕಾರವು ನಿವೃತ್ತ ನೌಕರರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ನಿವೃತ್ತ ನೌಕರರು ಪ್ರತಿಭಟನೆ ಮಾಡುವುದರಿಂದ ಪ್ರಯೋಜನ ಇಲ್ಲದಂತಾಗಿದೆ. ಕಾರ್ಯನಿರತ ನೌಕರರು ಹೋರಾಟಕ್ಕೆ ಇಳಿದರೆ ಬ್ಯಾಂಕ್‌ಗಳನ್ನೇ ಬಂದ್ ಮಾಡಬಹುದು. ಅದರಿಂದ ಶೀಘ್ರಗತಿಯ ಪರಿಣಾಮ ಬೀರಲಿದೆ. ಬೇಡಿಕೆಗಳು ಈಡೇರುವುದು ಕೂಡ ವೇಗ ಪಡೆಯಲಿದೆ ಎಂದು ಹೇಳಿದರು.

ಈ ಸಂದರ್ಭ ಎಐಬಿಪಿಆರ್‌ಸಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್.ಭಟ್, ಚೇರ್‌ಮನ್ ಡಿ.ಎನ್. ಪ್ರಕಾಶ್, ಅಖಿಲ ಭಾರತೀಯ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ (ಎಐಬಿಒಸಿ) ಉಪ ಕಾರ್ಯದರ್ಶಿ ಸತೀಶ್ ಶೆಟ್ಟಿ, ಕೆನರಾ ಬ್ಯಾಂಕ್ ಅಧಿಕಾರಿಗಳ ಸಂಘದ ಉಪ ಜಂಟಿ ಕಾರ್ಯದರ್ಶಿ ರಮೇಶ್ ನಾಯ್ಕಾ, ಎಸ್‌ಬಿಐ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ವಿಶ್ವನಾಥ, ಟಿ.ಆರ್. ಭಟ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News