ಫೆ. 27: ‘ನಿಮ್ಮ ಅಂಚೆ ಬ್ಯಾಂಕ್’ ವಿಶೇಷ ಕಾರ್ಯಕ್ರಮ

Update: 2020-02-19 16:45 GMT

ಮಂಗಳೂರು, ಫೆ.19: ಭಾರತೀಯ ಅಂಚೆ, ಮಂಗಳೂರು ಹಾಗೂ ಪುತ್ತೂರು ವಿಭಾಗಗಳಿಂದ ಫೆ.27ರಂದು ‘ನಿಮ್ಮ ಅಂಚೆ, ನಿಮ್ಮ ಬ್ಯಾಂಕ್, ಕ್ಷಣದಲ್ಲೇ ಖಾತೆ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ದ.ಕ. ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ.

 ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿನ ಸೇವೆಗಳು ಭಾರತದಾದ್ಯಂತ 1,55,531 ಅಂಚೆ ಕಚೇರಿಗಳಲ್ಲಿ ಲಭ್ಯವಿದ್ದು, ಜಿಲ್ಲೆಯಲ್ಲಿ ಮಂಗಳೂರು ಮತ್ತು ಪುತ್ತೂರು ವಿಭಾಗಗಳಲ್ಲಿ 594 ಅಂಚೆ ಕಚೇರಿಗಳಲ್ಲಿ ಲಭ್ಯವಿದೆ. ಅಂಚೆಯಣ್ಣನ ಮೂಲಕವೂ ಮನೆಬಾಗಿಲಿನಲ್ಲಿ ಈ ಸೇವೆಗಳು ಲಭ್ಯವಿದೆ.

‘ನಿಮ್ಮ ಅಂಚೆ, ನಿಮ್ಮ ಬ್ಯಾಂಕ್, ಕ್ಷಣದಲ್ಲೇ ಖಾತೆ’ಯು ವಿಶಿಷ್ಟ ಪರಿಕಲ್ಪನೆಯಾಗಿದೆ. ಇಂದು ಎಲ್ಲ ಸಾರ್ವಜನಿಕರಿಗೂ ಅಂಚೆ ಕಚೇರಿಯಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿನ ಖಾತೆಯನ್ನು ತೆರೆಯಲು ವಿಶೇಷ ವ್ಯವಸ್ಥೆ ಮಾಡಲಾಗಿದೆ.

ಇದು ಸಂಪೂರ್ಣ ಕಾಗದ ರಹಿತವಾಗಿದ್ದು ಯಾವುದೇ ಸಹಿ ಅಥವಾ ದಾಖಲೆಗಳ ಪ್ರತಿ ನೀಡಬೇಕಾಗಿಲ್ಲ. ಆಧಾರ್ ಸಂಖ್ಯೆ, ಮೊಬೈಲ್ ನಂಬರ್ ಹಾಗೂ ಪ್ರಾರಂಭಿಕ ಶುಲ್ಕ 100 ರೂ. ನೀಡಿದರೆ ಸಾಕು. ಖಾತೆ ತೆರೆದರೆ ಮನೆಯಿಂದಲೇ ವಿದ್ಯುತ್ ಬಿಲ್ ಪಾವತಿ, ಡಿ.ಟಿ.ಎಚ್, ಮೊಬೈಲ್ ರಿಚಾರ್ಜ್ ಮಾಡಬಹುದು.

ಅಂಚೆ ಉಳಿತಾಯ ಖಾತೆಯೊಂದಿಗೆ ಜೋಡಿಸಿ ಅದಕ್ಕೆ ಹಣ ಹಾಕುವ ಅಥವಾ ಅದರಿಂದ ಹಣ ತೆಗೆಯುವ ಸೌಲಭ್ಯವೂ ಲಭ್ಯವಿದೆ. ಅಂಚೆ ಕಚೇರಿಯ ಆರ್‌ಡಿ, ಪಿಪಿಎಫ್, ಸುಕನ್ಯಾ ಸಮೃದ್ಧಿ ಖಾತೆಗಳಿಗೆ ಮನೆಯಿಂದಲೇ ಹಣ ಜಮಾ ಮಾಡಬಹುದು. ಸರದಿಯ ಸಾಲುಗಳಲ್ಲಿ ನಿಲ್ಲಬೇಕಾಗಿಲ್ಲ. ಸರಕಾರದ ಬೇರೆ ಬೇರೆ ಇಲಾಖೆಗಳಿಂದ ದೊರಕುವ ಸಹಾಯಧನ, ವೃದ್ಧಾಪ್ಯ ವೇತನ, ವಿಕಲಚೇತನ ವೇತನ, ವಿಧವಾ ವೇತನ ಇತ್ಯಾದಿಗಳನ್ನು ಅರ್ಹ ಫಲಾನುಭವಿಗಳು ಪಡೆಯಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News