ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ್ದ ಪ್ರಕರಣ: ಶಂಕಿತ ಉಗ್ರ ಆದಿತ್ಯ ರಾವ್‌ ಪರೇಡ್ ಗೆ ಸಿದ್ಧತೆ ?

Update: 2020-02-19 16:51 GMT

ಮಂಗಳೂರು, ಫೆ.19: ಬಜ್ಪೆಯ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜ.20ರಂದು ಸ್ಫೋಟಕ ಇರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರ ಆದಿತ್ಯ ರಾವ್‌ನನ್ನು ಪ್ರತ್ಯಕ್ಷದರ್ಶಿಗಳ ಎದುರು ಪರೇಡ್ ನಡೆಸಲು ಪೊಲೀಸ್ ಇಲಾಖೆ ತಯಾರಿ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸ್ಫೋಟಕ ಇರಿಸಿದ್ದ ಪ್ರಕರಣದ ತನಿಖಾಧಿಕಾರಿಗಳು ಈಗಾಗಲೇ 45ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆಗಳನ್ನು ಸಂಗ್ರಹಿಸಿದ್ದಾರೆ. ಇದರಲ್ಲಿ 10ಕ್ಕೂ ಅಧಿಕ ಪ್ರತ್ಯಕ್ಷದರ್ಶಿಗಳ ಎದುರು ಶಂಕಿತ ಉಗ್ರ ಆದಿತ್ಯ ರಾವ್‌ನನ್ನು ಪರೇಡ್ ನಡೆಸಲು ಎಲ್ಲ ಸಿದ್ಧತೆ ನಡೆಸಲಾಗಿದೆ. ಪರೇಡ್ ನಡೆಸಲು ಕ್ರಮ ಕೈಗೊಳ್ಳಲು ಮಂಗಳೂರು ತಹಶೀಲ್ದಾರ್‌ಗೆ ಪೊಲೀಸರು ಪತ್ರ ಬರೆದಿದ್ದಾರೆ. ತಹಶೀಲ್ದಾರ್‌ರು ಶೀಘ್ರದಲ್ಲಿಯೇ ಪ್ರತಿಕ್ರಿಯೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣದ ಮಾಸ್ಟರ್‌ಮೈಂಡ್, ಶಂಕಿತ ಉಗ್ರ ಆದಿತ್ಯ ರಾವ್ ಸದ್ಯ ಮಂಗಳೂರು ಉಪ ಕಾರಾಗೃಹದಲ್ಲಿದ್ದಾನೆ. ಪ್ರತ್ಯಕ್ಷದರ್ಶಿ ಸಾಕ್ಷಿಗಳ ಎದುರು ಪರೇಡ್ ನಡೆಸಲು ತಹಶೀಲ್ದಾರ್‌ರ ಅನುಮತಿ ಅತ್ಯಗತ್ಯವಾಗಿದೆ. ಹಾಗಾಗಿಯೇ ಪೊಲೀಸರು ತಹಶೀಲ್ದಾರ್‌ಗೆ ಪತ್ರ ಬರೆಯುವ ಮೂಲಕ ಅನುಮತಿಗೆ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ವಿಮಾನ ನಿಲ್ದಾಣದಲ್ಲಿ ಸಿಕ್ಕಿದ್ದ ಸ್ಫೋಟಕವನ್ನು ನಾಶ ಮಾಡಲಾಗಿತ್ತು. ಸ್ಫೋಟಕದ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿತ್ತು. ಅದರ ವರದಿ ಇನ್ನೂ ತನಿಖಾಧಿಕಾರಿಗಳಿಗೆ ತಲುಪಿಲ್ಲ. ಶೀಘ್ರದಲ್ಲಿಯೇ ವರದಿ ಬರುವ ಸಾಧ್ಯತೆ ಇದೆ. ವರದಿಯ ಪರಿಶೀಲನೆಯ ನಂತರವೇ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲು ಪೊಲೀಸರು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News