ಪಠ್ಯದ ಜೊತೆಗೆ ಸಾಮಾಜಿಕ ಮೌಲ್ಯದ ಶಿಕ್ಷಣ ವಿದ್ಯಾರ್ಥಿಗಳಿಗೆ ಅಗತ್ಯ : ಯೂಸುಫ್ ವಿಟ್ಲ

Update: 2020-02-19 17:24 GMT

ಬಂಟ್ವಾಳ, ಫೆ.19: ಪಠ್ಯ, ಸಹಪಠ್ಯಗಳ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ವಿದ್ಯಾಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಾಡಲು ಯಾವುದಾದರೂ ಶಿಕ್ಷಣ ಸಂಸ್ಥೆಗೆ ಸಾಧ್ಯವಾದರೆ ಅದು ಮಾದರಿ ಶಿಕ್ಷಣ ಸಂಸ್ಥೆಯಾಗಲಿದೆ ಎಂದು ಬಿ.ಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಯೂಸುಫ್ ವಿಟ್ಲ ಹೇಳಿದ್ದಾರೆ.

ಬಿ.ಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಮತ್ತು ಹೆತ್ತವರ ಜಂಟಿ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಾಠ ಬೋಧನೆ ಪ್ರತೀ ಶಿಕ್ಷಣ ಸಂಸ್ಥೆ ಮಾಡಲೇಬೇಕಾದ ಕಾರ್ಯವಾಗಿದೆ. ಆದರೆ ಪಾಠ ಬೋಧನೆಯ ಜೊತೆಗೆ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಾಮಾಜಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಶಿಕ್ಷಣವನ್ನು ನೀಡಲು ಶಿಕ್ಷಣ ಸಂಸ್ಥೆಗಳು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿಗಳನ್ನು ಅವರ ಹೆತ್ತವರ ಸಮ್ಮುಖದಲ್ಲಿ ಸನ್ಮಾನಿಸ ಲಾಯಿತು. ಅಲ್ಲದೆ ಪ್ರತಿಶತ ನೂರು ಹಾಜರಾತಿಯನ್ನು ದಾಖಲಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಹೆತ್ತವರನ್ನು ಅವರ ಇಳಿವಯಸ್ಸಿನಲ್ಲಿ ಆತ್ಮಸಾಕ್ಷಿಯಾಗಿ ನೋಡಿಕೊಳ್ಳುತ್ತೇವೆ ಎಂಬ ಪ್ರತಿಜ್ಞೆಯನ್ನು ಸ್ವೀಕರಿಸಿದರು.

ಆಂಗ್ಲ ಭಾಷಾ ಉಪನ್ಯಾಸಕ ದಾಮೋದರ್  ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ಅಬ್ದುಲ್ ರಝಾಕ್ ಪ್ರತಿಜ್ಞಾವಿಧಿ ಬೋಧಿಸಿ ದರು. ಉಪನ್ಯಾಸಕರಾದ ಬಾಲಕೃಷ್ಣ ನಾಯ್ಕ್ ಕೆ., ಲವೀನಾ ಶಾಂತಿ ಲೋಬೋ, ಯಶೋಧ ಕೆ., ಲಕ್ಷ್ಮೀ ಆಚಾರ್ಯ ಕೆ., ಆಶಾಲತಾ, ಹನೀಫ್, ಅಂಬಿಕಾ, ದಿವ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮುರ್ಷಿದಾ ಬಾನು ಸ್ವಾಗತಿಸಿ, ಭೂಮಿಕಾ ವಂದಿಸಿದರು. ವಿದ್ಯಾರ್ಥಿಗಳಾದ ಕಾರ್ತಿಕ್ ಭಟ್, ತಸ್ರೀನಾ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News