ಮಂಗಳೂರು: ಎಜೆ ಆಸ್ಪತ್ರೆಯಲ್ಲಿ ಹೃದಯ ರಕ್ತನಾಳದ ಅಪರೂಪದ ಚಿಕಿತ್ಸೆ

Update: 2020-02-20 11:46 GMT

ಮಂಗಳೂರು, ಫೆ. 20: ಹೃದಯದ ಕೊರೊನರಿ ರಕ್ತನಾಳಗಳಲ್ಲಿರುವ ಕ್ಯಾಲ್ಸಿಫೈಡ್ ಬ್ಲಾಕ್‌ಗಳನ್ನು ಭೇದಿಸಲು ಸಹಾಯ ಮಾಡಬಲ್ಲ ‘ಶಾಕ್‌ವೇವ್ ಕೊರೊನರಿ ಇಂಟ್ರಾವ್ಯಾಸ್ಕುಲರ್ ಲಿಥೋಟ್ರಿಪ್ಸಿ’ ಎಂಬ ಹೊಸ ತಂತ್ರಜ್ಞಾನ ಚಿಕಿತ್ಸಾ ಪ್ರಕ್ರಿಯೆಯನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.

ಹೃದಯದಲ್ಲಿ ದಟ್ಟವಾದ ಕ್ಯಾಲ್ಸಿಫೈಡ್ ಬ್ಲಾಕ್‌ಗಳನ್ನು ಹೊಂದಿರುವ 71 ವರ್ಷದ ವ್ಯಕ್ತಿಗೆ ಅತ್ಯಂತ ಅಪರೂಪದ ಹಾಗೂ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ಈ ಹೃದಯ ಚಿಕಿತ್ಸಾ ಪದ್ಧತಿಯನ್ನು ಹೃದಯ ರೋಗ ವಿಭಾಗದ ಮುಖ್ಯಸ್ಥ ಡಾ.ಬಿ.ವಿ.ಮಂಜುನಾಥ್ ಯಶಸ್ವಿಯಾಗಿ ನಡೆಸಿದ್ದಾರೆ ಎಂದು ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ತಂತ್ರಜ್ಞಾನದಲ್ಲಿ ಹೃದಯದ ಕೊರೊನರಿ ರಕ್ತನಾಳಗಳಲ್ಲಿನ ದಟ್ಟ ಕ್ಯಾಲ್ಸಿಫೈಡ್ ಸಂಗ್ರಹವನ್ನು ಭೇದಿಸಲು ಸೋನಿಕ್ ತರಂಗಗಳನ್ನು ಬಳಸಲಾಗುತ್ತದೆ. ಈ ವಿಧಾನದಲ್ಲಿ ರಕ್ತನಾಳಗಳಲ್ಲಿ ತೂರಿಸಲ್ಪಟ್ಟ ಬಲೂನ್ ರಕ್ತನಾಳಗಳನ್ನು ಇನ್ನಷ್ಟು ಅಗಲವಾಗಿ ವಿಸ್ತರಿಸಲು ತನ್ಮೂಲಕ ಅದರೊಳಗೆ ಸ್ಟೆಂಟ್‌ನ್ನು ಸುಲಭವಾಗಿ ಮತ್ತು ಸುರಕ್ಷಿತವಾಗಿ ಮತ್ತು ನಿಖರವಾಗಿ ಅಳವಡಿಸಲು ಅನುವು ಮಾಡಿ ಕೊಡುತ್ತದೆ.
ಇದು ಕರಾವಳಿ ಕರ್ನಾಟಕದಲ್ಲಿ ಪ್ರಥಮ ಮತ್ತು ರಾಜ್ಯದಲ್ಲಿ ದ್ವಿತೀಯ ಚಿಕಿತ್ಸಾ ಪ್ರಕ್ರಿಯೆಯಾಗಿದ್ದು, ಇದುವರೆಗೆ ಭಾರತದಲ್ಲಿ ಸುಮಾರು 50 ರೋಗಿಗಳು, ವಿಶ್ವದಲ್ಲಿ 3 ಸಾವಿರ ರೋಗಿಗಳು ಈ ಚಿಕಿತ್ಸೆಗೆ ಒಳಪಟ್ಟಿರುತ್ತಾರೆ.

ಹೃದಯದ ಕೊರೊನರಿ ರಕ್ತನಾಳಗಳ ಕ್ಯಾಲ್ಸಿಫೈಡ್ ಬ್ಲಾಕ್‌ನ್ನು ತೆಗೆದು ಹಾಕುವಲ್ಲಿ ಪ್ರಸ್ತುತ ಲಭ್ಯವಿರುವ ರೋಟಾಬ್ಲೇಷನ್ ತಂತ್ರಜ್ಞಾನದ ಮೂಲಕ ರಕ್ತನಾಳಗಳ ಆಳದಲ್ಲಿ ಅಂಟಿಕೊಂಡಿರುವ ಕ್ಯಾಲ್ಸಿಯಂ ಸಂಗ್ರಹವನ್ನು ಸಂಪೂರ್ಣವಾಗಿ ತೆಗೆದು ಹಾಕಲು ಅಸಾಧ್ಯ. ಇದಕ್ಕೆ ಹೋಲಿಸಿದರೆ ಈ ಸುಧಾರಿತ ತಂತ್ರಜ್ಞಾನವಾದ ‘ಶಾಕ್ ವೇವ್ ಲಿಥೋಟ್ರಿಪ್ಸಿ’ಯ ಮೇಲ್ಪದರ ಹಾಗೂ ಅತ್ಯಂತ ಆಳದಲ್ಲಿರುವ ಕ್ಯಾಲ್ಸಿಯಂ ಸಂಗ್ರಹವನ್ನು ಸೀಳಿ, ರಕ್ತನಾಳದ ಕ್ಯಾಲ್ಸಿಫೈಡ್ ಬ್ಲಾಕ್‌ನ್ನು ಸಿಡಿದು ಒಡೆದು ತೆಗೆಯುತ್ತದೆ. ರೋಟಾಬ್ಲೇಷನ್‌ಗಿಂತಲೂ ಹೆಚ್ಚು ಸುರಕ್ಷಿತವಾಗಿದೆ ಎಂದು ಡಾ.ಬಿ.ವಿ.ಮಂಜುನಾಥ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News