ಮನಪಾ ಸೂಚನೆ ಪಾಲನೆ ನಿರ್ಲಕ್ಷ್ಯ : ತ್ಯಾಜ್ಯ ಸಂಸ್ಕರಣಾ ಘಟಕವಿಲ್ಲದ 10 ಫ್ಲಾಟ್‌ಗಳಿಗೆ ದಂಡ

Update: 2020-02-20 11:51 GMT

ಮಂಗಳೂರು, ಫೆ. 20: ನಗರದ ಅಪಾರ್ಟ್‌ಮೆಂಟ್ ಸೇರಿದಂತೆ ಭಾರೀ ತ್ಯಾಜ್ಯ ಸಂಗ್ರಾಹಕರು ತ್ಯಾಜ್ಯ ಸಂಸ್ಕರಣಾ ಘಟಕವನ್ನು ರಚಿಸಿ ತ್ಯಾಜ್ಯವನ್ನು ನಿರ್ವಹಿಸಬೇಕೆಂಬ ಮಂಗಳೂರು ಮಹಾನಗರ ಪಾಲಿಕೆ ಸೂಚನೆಯನ್ನು ನಿರ್ಲಕ್ಷ ವಹಿಸುತ್ತಿರುವವರ ಮೇಲೆ ದಂಡ ವಿಧಿಸುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.

ಈವರೆಗೆ ಸುಮಾರು 10 ಅಪಾರ್ಟ್‌ಮೆಂಟ್‌ಗಳಿಗೆ 1,45,000 ರೂ. ದಂಡ ವಿಧಿಸಲಾಗಿದೆ.

ನಗರದ ಅಪಾರ್ಟ್‌ಮೆಂಟ್ ಹಾಗೂ ವಾಣಿಜ್ಯ ಸಂಸ್ಥೆಗಳಲ್ಲಿ ತ್ಯಾಜ್ಯ ಸಂಸ್ಕರಣೆ ವ್ಯವಸ್ಥೆಯನ್ನು ಕಲ್ಪಿಸಲಾಗದಿದ್ದಲ್ಲಿ ಅಥವಾ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ರಚಿಸಲಾಗದಿದ್ದಲ್ಲಿ ಫೆ. 10ರಿಂದ ಅನ್ವಯವಾಗುವಂತೆ ದಂಡ ವಿಧಿಸುವುದಾಗಿ ಮನಪಾ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.

ಪ್ರಥಮ ಹಂತವಾಗಿ 1948 ಅಪಾರ್ಟ್‌ಮೆಂಟ್‌ಗಳಿಗೆ ನೋಟೀಸು ಕೂಡಾ ನೀಡಲಾಗಿದೆ. ಕಳೆದ ಡಿಸೆಂಬರ್ 3ರಂದು ಎಲ್ಲಾ ಸಂಘ ಸಂಸ್ಥೆಗಳೊಂದಿಗೆ ಸಭೆ ಕರೆದು ಡಿಸೆಂಬರ್ ಅಂತ್ಯದೊಳಗೆ ತ್ಯಾಜ್ಯ ಸಂಸ್ಕರಣಾ ಘಟಕ ರಚಿಸುವಂತೆ ಮರು ಸೂಚನೆ ನೀಡಲಾಗಿತ್ತು. ಕೆಲವು ಅಪಾರ್ಟ್‌ಮೆಂಟ್ ಅಸೋಸಿಯೇಶನ್‌ಗಳು ತ್ಯಾಜ್ಯ ಸಂಸ್ಕರಣೆ ಮಾಡುವ ವ್ಯವಸ್ಥೆ ಕಲ್ಪಿಸಿದ್ದು, ಹೆಚ್ಚಿನ ಅಪಾರ್ಟ್‌ಮೆಂಟ್ ಅಸೋಸಿಯೇಶನ್‌ಗಳು ಹಸಿ ತ್ಯಾಜ್ಯ ಸಂಸ್ಕರಣೆಯ ಘಟಕ ಸ್ಥಾಪಿಸಲು ಆಸಕ್ತಿ ತೋರದ ಕಾರಣ ದಂಡ ವಿಧಿಸುವ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಆಂಭಿಸಲಾಗಿದೆ.

ಪ್ರಥಮ ಬಾರಿಗೆ ತಲಾ 25,000 ರೂ.ನಂತೆ, ಎರಡನೆ ಬಾರಿಗೆ 50,000 ರೂ. ದಂಡ ಹಾಗೂ ಮೂರನೆ ಬಾರಿಗೆ ತ್ಯಾಜ್ಯ ಉತ್ಪಾದಕರ ವಿರುದ್ಧ ಪ್ರಕರಣ ದಾಖಲಿಸಲು ಮನಪಾ ನಿರ್ಧರಿಸಿ ಕ್ರಮ ಕೈಗೊಂಡಿದೆ.

ಮುಂದಿನ ದಿನಗಳಲ್ಲಿ ಪಾಲಿಕೆಯ ಎಲ್ಲಾ ಭಾರೀ ತ್ಯಾಜ್ಯ ಉತ್ಪಾದಕರನ್ನು ಆರೋಗ್ಯ ವಿಭಾಗದಿಂದ ಭೇಟಿ ನೀಡಿ ಪರಿಶೀಲಿಸಿ ದಂಡ ವಿಧಿಸುವ ಕ್ರಮ ಮುಂದುವರಿಸಲಾಗುವುದು ಎಂದು ಪಾಲಿಕೆ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News