ರಾಜಕೀಯ ಪ್ರೇರಿತ ಷಡ್ಯಂತ್ರದಿಂದ ಸೌಹಾರ್ದತೆಗೆ ಪೆಟ್ಟು: ಶಾಫಿ ಸಅದಿ

Update: 2020-02-20 14:19 GMT

ಉಡುಪಿ, ಫೆ.20: ಇಂದು ಎಲ್ಲಕ್ಕಿಂತ ಮುಖ್ಯವಾಗಿ ದೇಶದ ಭದ್ರಬುನಾದಿ ಯಾಗಿರುವ ಸೌಹಾರ್ದತೆ ಹಾಗೂ ಸಹಬಾಳ್ವೆಗೆ ಸಮಾಜದಲ್ಲಿ ಪೆಟ್ಟು ಬೀಳುವ ಕೆಲಸ ನಡೆಯುತ್ತಿದೆ. ಆದುದರಿಂದ ಯಾರು ಕೂಡ ರಾಜಕೀಯ ಪ್ರೇರಿತ ಷಡ್ಯಂತ್ರಕ್ಕೆ ಬಲಿಯಾಗದೆ ಸಮಾಜದಲ್ಲಿ ಸೌಹಾರ್ದತೆ, ಸಹಬಾಳ್ವೆಯ ಬದುಕು ನಡೆಸಬೇಕು ಎಂದು ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಎನ್.ಕೆ. ಮುಹಮ್ಮದ್ ಶಾಫಿ ಸಅದಿ ಬೆಂಗಳೂರು ಹೇಳಿದ್ದಾರೆ.

ಕರ್ನಾಟಕ ಮುಸ್ಲಿಂ ಜಮಾಅತ್ ಆಶ್ರಯದಲ್ಲಿ ಉಡುಪಿಯ ಲಿಗಾಡೋ ಹೊಟೇಲಿನ ಸಭಾಂಗಣದಲ್ಲಿ ಗುರುವಾರ ನಡೆದ ‘ಪ್ರಜಾ ಭಾರತ’ ರಾಜ್ಯ ಮಟ್ಟದ ಜನಜಾಗೃತಿ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.

ಸಿಎಎ, ಎನ್‌ಆರ್‌ಸಿ ಕಾಯ್ದೆಗಳ ವಿರುದ್ಧ ಕಾನೂನು ರೀತಿಯಲ್ಲಿ ಹೋರಾಟ ಮಾಡಬೇಕು. ಇದರಿಂದ ಸಮಾಜದ ಸೌಹಾರ್ದತೆ, ಸಹಬಾಳ್ವೆಗೆ ಯಾವುದೇ ಧಕ್ಕೆ ಉಂಟಾಗಬಾರದು. ನಾವು ಈ ದೇಶವನ್ನು ಪ್ರೀತಿಯಿಂದ ಕಟ್ಟಬೇಕೆ ಹೊರತು ಧ್ವೇಷದಿಂದ ಅಲ್ಲ ಎಂದರು.

ಈ ದೇಶದ ಸಂವಿಧಾನದ ಅಡಿಯಲ್ಲಿಯೇ ಭಾರತದಲ್ಲಿ ಆಡಳಿತ ನಡೆಸಲಾಗುತ್ತಿದೆ. ಅದು ಬಿಟ್ಟು ಯಾವುದೇ ಒಂದು ಪಕ್ಷದ ಪ್ರಣಾಳಿಕೆ ಮೇಲೆ ಆಡಳಿತ ನಡೆಸಲು ಸಾಧ್ಯವಿಲ್ಲ. ಸಂವಿಧಾನಕ್ಕೆ ವಿರುದ್ಧವಾಗಿ ಯಾವುದನ್ನು ಮಾಡಿದರೆ ನಮಗೆ ನ್ಯಾಯಾಂಗ ವ್ಯವಸ್ಥೆ ಇದೆ ಮತ್ತು ಕಾನೂನು ರೀತಿಯಲ್ಲಿ ಹೋರಾಟ ಮಾಡಲು ಅವಕಾಶ ಇದೆ ಎಂದು ಅವರು ತಿಳಿಸಿದರು.

ಧರ್ಮವನ್ನು ಅರಿತ ಯಾವುದೇ ವ್ಯಕ್ತಿ ಹಿಂದೂ ಮತ್ತು ಮುಸ್ಲಿಮರ ಮಧ್ಯೆ ಗಲಭೆಗೆ ಅವಕಾಶ ನೀಡುವುದಿಲ್ಲ. ನಾವು ನಮ್ಮ ಬುದ್ದಿವಂತಿಕೆಯನ್ನು ಉಪ ಯೋಗಿಸಿಕೊಂಡು ವಿವೇಕದಿಂದ ವರ್ತಿಸಬೇಕು. ಯಾವುದೇ ರಾಜಕಾರಣಿಗಳ ಮಾತಿಗೆ ಬಲಿಯಾಗಬಾರದು ಎಂದು ಅವರು ಹೇಳಿದರು.

ಸ್ವಾತಂತ್ರ ದೊರೆತು 70 ವರ್ಷಗಳಾದರೂ ನಮ್ಮ ಹಕ್ಕುಗಳಿಗಾಗಿ ನಾವು ಇಂದು ಬೀದಿಯಲ್ಲಿದ್ದೇವೆ. ಬೇರೆ ಸಮುದಾಯದ ರೀತಿಯಲ್ಲಿ ಯಾಕೆ ನಾವು ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ 80ಲಕ್ಷ ಜನಸಂಖ್ಯೆ ಇದ್ದರೂ ಕೇವಲ ಏಳು ಮಂದಿ ಶಾಸಕರಿದ್ದಾರೆ. ಒಬ್ಬರೇ ಒಬ್ಬ ಸಂಸದರಿಲ್ಲ. ಆದುದರಿಂದ ನಾವು ರಾಜಕೀಯವಾಗಿಯೂ ಬೆಳೆಯಬೇಕು. ನಮ್ಮ ಸಮಸ್ಯೆಗಳ ಬಗ್ಗೆ ವಿಧಾನ ಸಭೆ, ಸಂಸತ್ತಿನಲ್ಲಿ ಧ್ವನಿ ಎತ್ತಬೇಕಾಗಿದೆ ಎಂದರು.

ಅಭಿಯಾನವನ್ನು ಉದ್ಘಾಟಿಸಿದ ಜಮಾಅತ್ ರಾಜ್ಯ ಉಪಾಧ್ಯಕ್ಷ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಮಾತನಾಡಿ, ಇಂದು ಮಾನವೀಯತೆ ಎಂಬುದು ಕ್ಷೀಣಿಸುತ್ತ ಬರುತ್ತಿದೆ. ಪರಸ್ಪರರಲ್ಲಿ ಅಪನಂಬಿಕೆ ಹೆಚ್ಚಾಗುತ್ತಿದೆ. ಇಂದು ಮನುಷ್ಯತ್ವವನ್ನು ಎಲ್ಲ ಕಡೆ ಪಸರಿಸುವ ಕೆಲಸ ಮಾಡಬೇಕು. ಇಂದು ಯುವಜನತೆ ಅಪರಾಧಿ ಕೃತ್ಯ, ಡ್ರಗ್ಸ್ ಮಾಫಿಯಾದಂತಹ ದುಶ್ಚಟಗಳಿಗೆ ಬಲಿ ಯಾಗುತ್ತಿದೆ. ಅದರಿಂದ ದೂರ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.

ಭಾರತೀಯ ಮುಸ್ಲಿಮರು ತಮ್ಮ ಹೆತ್ತವರಂತೆ ಈ ನೆಲವನ್ನು ಪ್ರೀತಿಸುವವರಾಗಿದ್ದಾರೆ. ದೇಶಪ್ರೇಮ ಎಂಬುದು ನಮ್ಮ ರಕ್ತದ ಕಣಕಣದಲ್ಲೂ ಇದೆ. ಈ ದೇಶದ ರಕ್ಷಣೆಗೆ ಮುಸ್ಲಿಮರು ಸದಾ ಸಿದ್ಧರಿದ್ದಾರೆ. ಸಮಾಜದಲ್ಲಿ ಸೌಹಾರ್ದತೆ ಗಟ್ಟಿಗೊಳಿಸುವ ಮೂಲಕ ದೇಶ ಕಟ್ಟುವ ಕೆಲಸವನ್ನು ಎಲ್ಲರು ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಅಧ್ಯಕ್ಷತೆಯನ್ನು ಮುಸ್ಲಿಮ್ ಜಮಾಅತ್ ರಾಜ್ಯ ಉಪಾಧ್ಯಕ್ಷ ಅಬೂ ಸುಫಿ ಯಾನ್ ಇಬ್ರಾಹಿಂ ಮದನಿ ವಹಿಸಿದ್ದರು. ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ಬೆಂಗಳೂರು, ನಿವೃತ್ತ ಕೆಎಎಸ್ ಅಧಿಕಾರಿ ಇಜಾಝ್ ಅಹ್ಮದ್ ಬಳ್ಳಾರಿ ವಿಷಯ ಮಂಡನೆ ಮಾಡಿದರು.

ಜಮಾಅತ್ ರಾಜ್ಯ ಕಾರ್ಯದರ್ಶಿ ಕೆ.ಎಂ.ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, ರಾಜ್ಯ ವಕ್ಫ್  ಬೋರ್ಡ್ ಸದಸ್ಯ ಯಹ್ಕೂಬ್ ಯೂಸುಫ್ ಶಿವಮೊಗ್ಗ, ಸಯ್ಯಿದ್ ಜುನೈದ್ ತಂಙಳ್, ಜಮಾಅತ್ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಸಯ್ಯಿದ್ ಎಸ್.ಎಂ. ತಂಙಳ್, ಜಅಮಾತ್ ಜಿಲ್ಲಾಧ್ಯಕ್ಷ ಮೌಲಾನಾ ನಝೀರ್ ಅಝ್ಹರಿ, ಕಾರ್ಯಕ್ರಮ ನಿರ್ವಣಾ ಸಮಿತಿ ಅಧ್ಯಕ್ಷ ಹಾಜಿ ಪಿ. ಅಬೂಬಕ್ಕರ್ ನೇಜಾರು ಮುಖ್ಯ ಅತಿಥಿಳಾಗಿದ್ದರು.

ಪ್ರಮುಖರಾದ ಸಯ್ಯಿದ್ ಫರೀದ್ ಉಡುಪಿ, ಮುಹಮ್ಮದ್ ನಯೀಮ್ ಕಟಪಾಡಿ, ಬಿಎಸ್‌ಎಫ್ ರಫೀಕ್ ಕುಂದಾಪುರ, ಕೆ.ಎಸ್.ಎಂ.ಮನ್ಸೂರು, ಹಾಜಿ ಅಬ್ದುಲ್ಲಾ ಪರ್ಕಳ, ಶೇಖ್ ಗೌಸ್ ಕಾರ್ಕಳ, ಅಬ್ದುರ್ರಹ್ಮಾನ್ ಮಲ್ಪೆ, ಮುಹಮ್ಮದ್ ಮೌಲಾ ಮೊದಲಾದವರು ಉಪಸ್ಥಿತರಿದ್ದರು.

ಜಮಾಅತ್ ರಾಜ್ಯ ಕಾರ್ಯದರ್ಶಿ ಎಂ.ಬಿ.ಎಂ.ಸ್ವಾದಿಕ್ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಸುಬ್ಹಾನ್ ಅಹ್ಮದ್ ಹೊನ್ನಾಳ ವಂದಿಸಿದರು. ಕೆ.ಎ. ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಹಾಗೂ ವೈಬಿಸಿ ಬಶೀರ್ ಅಲಿ ಮೂಳೂರು ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮಕ್ಕೆ ಆಗಮಿಸದ ಹರೇಕಳ ಹಾಜಬ್ಬ

ಈ ಅಭಿಯಾನವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಉದ್ಘಾಟನೆ ಮಾಡಬೇಕಾಗಿತ್ತು. ಆದರೆ ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆದ ಹಿನ್ನೆಲೆಯಲ್ಲಿ ಹಾಜಬ್ಬ ಈ ಕಾರ್ಯ ಕ್ರುಕ್ಕೆ ಆಗಮಿಸದೆ ದೂರ ಉಳಿದಿದ್ದಾರೆ.
ಈ ಬಗ್ಗೆ ಶಾಫಿ ಸಅದಿ ಪ್ರತಿಕ್ರಿಯಿಸಿ, ಹಾಜಬ್ಬ ಅವರೇ ಕಾರ್ಯಕ್ರಮಕ್ಕೆ ಬರುವುದಾಗಿ ಒಪ್ಪಿಕೊಂಡಿದ್ದರು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ವಿರೋಧದ ಹಿನ್ನೆಲೆಯಲ್ಲಿ ನನಗೆ ಬರಲು ಆಗಲ್ಲ, ನನ್ನನ್ನು ಕ್ಷಮಿಸಿ ಎಂದು ಕರೆ ಮಾಡಿ ತಿಳಿಸಿದ್ದರು. ನಾವು ಅವರಿಗೆ ಈ ಕಾರ್ಯಕ್ರಮದ ಮೂಲಕ ಸನ್ಮಾನಿಸಲು ಉದ್ದೇಶಿಸಿದ್ದೆವು. ಅಲ್ಲದೆ ಅವರೇ ಈ ಅಭಿಯಾನವನ್ನು ಉದ್ಘಾಟಿಸಬೇಕೆಂದು ತೀರ್ಮಾನ ಮಾಡಿದ್ದೆವು. ಆದರೆ ನಮ್ಮಲ್ಲಿ ಕೆಲವರಿಗೆ ಯಾವ ರೀತಿ ಆಲೋಚನೆ ಮಾಡಬೇಕೆಂಬ ಅರಿವೇ ಇಲ್ಲ. ಕೇವಲ ಆವೇಶ, ಉದ್ರೇಕ, ಅವಿವೇಕತನದಿಂದ ವರ್ತನೆ ಮಾಡಿದರೆ 70ವರ್ಷ ಅಲ್ಲ, ಇನ್ನೂ 70ವರ್ಷಗಳಾದರೂ ನಾವು ಹೀಗೇ ಇರುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News