ಕಾರ್ಕಳ: ಫೆ.22ರಿಂದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಬೆಳ್ಳಿಹಬ್ಬ ಸಮಾರಂಭ

Update: 2020-02-20 14:33 GMT

ಉಡುಪಿ, ಫೆ.20: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 25ನೇ ವರ್ಷದ ಬೆಳ್ಳಿಹಬ್ಬ ಸಮಾರಂಭ ಫೆ.22 ಮತ್ತು 23ರಂದು ಕಾರ್ಕಳದ ಶ್ರೀವೆಂಕಟರಮಣ ದೇವಸ್ಥಾನ ಶಿಕ್ಷಣ ಸಮೂಹ ಸಂಸ್ಥೆಯ (ಎಸ್‌ವಿಟಿ ವಿದ್ಯಾಸಂಸ್ಥೆ) ಆವರಣದಲ್ಲಿ ನಡೆಯಲಿದೆ ಎಂದು ಅಕಾಡೆಮಿಯ ಅಧ್ಯಕ್ಷ ಡಾ. ಕೆ.ಜಗದೀಶ್ ಪೈ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿವರಗಳನ್ನು ನೀಡಿದ ಅವರು, ಎರಡು ದಿನಗಳ ಸಮಾರಂಭದಲ್ಲಿ ಕೊಂಕಣಿ ಸಾಹಿತ್ಯ ಸಮ್ಮೇಳನ ಹಾಗೂ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪುರಸ್ಕಾರ ಪ್ರದಾನ ನಡೆಯಲಿದೆ ಎಂದರು.

ಈ ಕಾರ್ಯಕ್ರಮಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯ ಮೀನುಗಾರಿಕೆ, ಬಂದರು ಮತ್ತು ಧಾರ್ಮಿಕದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ಸಿ.ಟಿ.ರವಿ ಪಾಲ್ಗೊಳ್ಳಲಿದ್ದಾರೆ ಎಂದು ಜಗದೀಶ್ ಪೈ ತಿಳಿಸಿದರು.

ಫೆ.22ರ ಶನಿವಾರ ಬೆಳಗ್ಗೆ 8:30ಕ್ಕೆ ಅಕಾಡೆಮಿಯ ಬೆಳ್ಳಿಹಬ್ಬದ ಪ್ರಯುಕ್ತ ಕಾರ್ಕಳ ಗಾಂಧಿ ಮೈದಾನದಿಂದ ಎಸ್‌ವಿಟಿ ಶಾಲೆಯವರೆಗೆ ಶೋಭಾ ಯಾತ್ರೆ ನಡೆಯಲಿದೆ. 10ಗಂಟೆಗೆ ಸಚಿವ ಸಿ.ಟಿ.ರವಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಮಂಗಳೂರಿನ ಕೊಂಕಣಿ ಸಾಹಿತಿ ಗೋಕುಲದಾಸ ಪ್ರಭು ಅವರು ಸಮ್ಮೇಳನಾಧ್ಯಕ್ಷರಾಗಿರುವರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 25 ಮಂದಿ ಕೊಂಕಣಿ ಭಾಷಿಗರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದರು.

ಬಳಿಕ ಬೆಳಗ್ಗೆ 11:30ರಿಂದ ಬೆಂಗಳೂರಿನ ಡಾ.ಗೀತಾ ಶೆಣೈ ಅಧ್ಯಕ್ಷತೆಯಲ್ಲಿ ಸಾಹಿತ್ಯ ಗೋಷ್ಠಿ ನಡೆಯಲಿದೆ. ಅಪರಾಹ್ನ 2:30ರಿಂದ ಮಂಗಳೂರಿನ ಡಾ. ಮೋಹನ್ ಪೈ ಅಧ್ಯಕ್ಷತೆಯಲ್ಲಿ ಭಾಷಾ ಗೋಷ್ಠಿ ನಡೆಯಲಿದೆ. ಸಂಜೆ 4:15ರಿಂದ 5:45ರವರೆಗೆ ನಡೆಯುವ ಕೊಂಕಣಿ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ರಮೇಶ್ ಪೈ ವಹಿಸಲಿದ್ದಾರೆ. ರಾತ್ರಿ ಪ್ರತಿನಿಧಿಗಳಿಗಾಗಿ ‘ಅಪ್ಸರಾಧಾರ’ ಕೊಂಕಣಿ ಸಿನಿಮಾದ ಪ್ರದರ್ಶನವಿರುತ್ತದೆ.

ಫೆ.23ರ ರವಿವಾರ ಬೆಳಗ್ಗೆ ಸಮ್ಮೇಳನಾಧ್ಯಕ್ಷ ಗೋಕುಲದಾಸ ಪ್ರಭು ಅಧ್ಯಕ್ಷತೆ ಯಲ್ಲಿ ಕೊಂಕಣಿ ಸಂಸ್ಕೃತಿ ಗೋಷ್ಠಿ ನಡೆಯಲಿದ್ದು, ಇದರಲ್ಲಿ ಚೇಂಪಿ ರಾಮಚಂದ್ರ ಭಟ್, ಕಾಸರಗೋಡು ಚಿನ್ನಾ, ಡಾ.ಅರವಿಂದ ಶಾನುಭಾಗ್, ಸ್ಟೀಫನ್ ಕ್ವಾಡ್ರಸ್ ಪ್ರಬಂದ ಮಂಡಿಸಲಿದ್ದಾರೆ.

ಬೆಳಗ್ಗೆ 11:30ರಿಂದ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ಸಾಹಿತಿ ಗೋಕುಲದಾಸ ಪ್ರಭು ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕೊಂಕಣಿ ಭಾಷೆಯಲ್ಲಿ ಸಮಾರೋಪ ಭಾಷಣ ಮಾಡಲಿದ್ದಾರೆ. ಅಕಾಡೆಮಿ ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನವೂ ನಡೆಯಲಿದೆ. ಅಪರಾಹ್ನ 2:30ರಿಂದ ಅಕಾಡೆಮಿ ಪ್ರಶಸ್ತಿ ವಿಜೇತರೊಂದಿಗೆ ಸಂವಾದ ನಡೆಯಲಿದೆ ಎಂದು ಡಾ.ಪೈ ತಿಳಿಸಿದರು.

ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಪ್ರದಾನ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಬೆಳ್ಳಿಹಬ್ಬ ಹಾಗೂ ಕೊಂಕಣಿ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಸಂಜೆ 4:30ರಿಂದ 6:00ರವರೆಗೆ ನಡೆಯಲಿದೆ. ಅಧ್ಯಕ್ಷತೆಯನ್ನು ಡಾ.ಕೆ. ಜಗದೀಶ್ ಪೈ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಚಿವ ಬಸವರಾಜ ಬೊಮ್ಮಾಯಿ, ಸಂಸದೆ ಶೋಭಾ ಕರಂದ್ಲಾಜೆ, ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಆರ್.ಆರ್. ಜನ್ನು, ಸಂಧ್ಯಾ ಪೈ ಹಾಗೂ ಖ್ಯಾತ ಸಾಹಿತಿ ನಾ.ಡಿಸೋಜ ಭಾಗವಹಿಸಲಿದ್ದಾರೆ.

ಮುಖ್ಯಮಂತ್ರಿಗಳು ಅಕಾಡೆಮಿಯ 2019ನೇ ಸಾಲಿನ ಗೌರವ ಪ್ರಶಸ್ತಿಯನ್ನು ಗೋಕುಲದಾಸ್ ಪ್ರಭು (ಸಾಹಿತ್ಯ), ಆರ್ಗೋಡು ಮೋಹನದಾಸ ಶೆಣೈ (ಕಲೆ) ಹಾಗೂ ವಿಷ್ಣು ಶಾಬು ರಾಣೆ (ಜಾನಪದ) ಇವರಿಗೂ, ಪುಸ್ತಕ ಪ್ರಶಸ್ತಿಗಳನ್ನು ವೆಂಕಟೇಶ್ ನಾಯಕ್ (ಕವನ), ಕ್ಲೆರೆನ್ಸ್ ಡೊನಾಲ್ಡ್ ಪಿಂಟೊ (ಸಣ್ಣಕಥೆ) ಹಾಗೂ ಡಾ.ಪಿಯುಸ್ ಪದಲಿಸ್ ಪಿಂಟೊ (ಅಧ್ಯಯನ) ಇವರಿಗೆ ಪ್ರದಾನ ಮಾಡಲಿದ್ದಾರೆ ಎಂದು ಡಾ.ಪೈ ವಿವರಿಸಿದರು.

ಕಾರ್ಯಕ್ರಮದ ಬಳಿಕ ಸಂಜೆ 6ರಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ದಲ್ಲಿ ಆರು ಮಂದಿ ಪ್ರಸಿದ್ಧ ಸಂಗೀತಗಾರರು ತಮ್ಮ ಸಂಗೀತ ಕಚೇರಿಗಳನ್ನು ನಡೆಸಿಕೊಡಲಿದ್ದಾರೆ. ಇವರಲ್ಲಿ ಶಂಕರ ಶಾನುಭಾಗ್, ಉಪೇಂದ್ರ ಭಟ್, ಪುತ್ತೂರು ನರಸಿಂಹ ನಾಯಕ್, ಕವಿತಾ ಶೆಣೈ, ಮಹಾಲಕ್ಷ್ಮಿ ಶೆಣೈ ಹಾಗೂ ಎರಿಕ್ ಓಝಾರಿಯೂ ಸೇರಿದ್ದಾರೆ.

ಕರ್ನಾಟಕದಲ್ಲಿ ಕೊಂಕಣಿ ಭಾಷಿಗ ಒಟ್ಟು 41 ಪಂಗಡಗಳಿದ್ದು, ಎರಡು ದಿನಗಳ ಕಾರ್ಯಕ್ರಮದಲ್ಲಿ 2000ರಿಂದ 3000 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಸಮ್ಮೇಳನದ ಜೊತೆಗೆ ಆರೋಗ್ಯ ತಪಾಸಣೆ, ವೈದ್ಯಕೀಯ ಶಿಬಿರ, ರೆಡ್‌ಕ್ರಾಸ್‌ನಿಂದ ರಕ್ತದಾನ ಶಿಬಿರ, ದೇಶಿ ಗೋತಳಿಗಳ ಪ್ರದರ್ಶನವೂ ನಡೆಯಲಿದೆ ಎಂದು ಡಾ.ಜಗದೀಶ್ ಪೈ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ಬೆಳ್ಳಿಹಬ್ಬ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಪಿ.ಶೆಣೈ, ವೆಂಕಟೇಶ್ ಹೆಗಡೆ ಹಾಗೂ ಅಕಾಡೆಮಿ ರಿಜಿಸ್ಟ್ರಾರ್ ಕುಮಾರ ಬಾಬು ಬೆಕ್ಕೇರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News