ಫೆ. 22: ತನುಶ್ರೀ ಪಿತ್ರೋಡಿಯಿಂದ 5ನೇ ವಿಶ್ವ ದಾಖಲೆಗೆ ಪ್ರಯತ್ನ

Update: 2020-02-20 14:35 GMT

ಉಡುಪಿ, ಫೆ.20: ಈಗಾಗಲೇ ಯೋಗಾಸನದ ಮೂಲಕ ನಾಲ್ಕು ವಿಶ್ವ ದಾಖಲೆಗಳನ್ನು ತನ್ನ ಹೆಸರಿನಲ್ಲಿ ಹೊಂದಿರುವ ಉದ್ಯಾವರದ 11 ಹರೆಯದ ಬಾಲಕಿ ತನುಶ್ರೀ ಪಿತ್ರೋಡಿ ಇದೀಗ ಫೆ.22ರಂದು ಸಂಜೆ ಇನ್ನೊಂದು ವಿಶ್ವದಾಖಲೆ ಸ್ಥಾಪಿಸುವ ಪ್ರಯತ್ನ ನಡೆಸಲಿದ್ದಾಳೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ತನುಶ್ರೀ ಅವರ ತಂದೆ ಉದಯಕುಮಾರ್ ಈ ವಿಷಯ ತಿಳಿಸಿದರು. ಈ ಪ್ರದರ್ಶನ ಶನಿವಾರ ಸಂಜೆ 4:30ಕ್ಕೆ ಉದ್ಯಾವರದ ಗ್ರಾಮ ಪಂಚಾಯತ್ ಮೈದಾನದಲ್ಲಿ ನಡೆಯಲಿದೆ ಎಂದರು.

ಪಿತ್ರೋಡಿಯ ವೆಂಕಟರಮಣ ಸ್ಪೋರ್ಟ್ಸ್ ಮತ್ತು ಕಲ್ಚರಲ್ಸ್ ಸಹಕಾರ ದೊಂದಿಗೆ ಆಯೋಜಿಸುವ ಈ ಪ್ರದರ್ಶನದಲ್ಲಿ ‘ಚಕ್ರಾಸನ ರೇಸ್’ನಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ತನ್ನ ಹೆಸರು ದಾಖಲಿಸಲಿ ದ್ದಾರೆ. ತನುಶ್ರೀ ಅವರು ಚಕ್ರಾಸನದ ಮೂಲಕ 100ಮೀ. ದೂರವನ್ನು ದಾಖಲೆಯ ಸಮಯದಲ್ಲಿ ಕ್ರಮಿಸಲು ಪ್ರಯತ್ನಿಸಲಿದ್ದಾರೆ.

ಕಳೆದ ವರ್ಷ ಹಿಮಾಚಲ ಪ್ರದೇಶದ 11ರ ಹರೆಯದ ಮಾಸ್ಟರ್ ಅಶೀಶ್ ಅವರು ಚಕ್ರಾಸನ ಮೂಲಕ 100ಮೀ. ದೂರವನ್ನು 3.34 ಸೆ.ಗಳಲ್ಲಿ ಕ್ರಮಿಸಿರುವುದು ಈಗ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲೆಯಾಗಿದೆ. ತನುಶ್ರೀ ಈ ದಾಖಲೆಯನ್ನು ಮುರಿಯಲು ಪ್ರಯತ್ನಿಸಲಿ ದ್ದಾರೆ ಎಂದು ಉದಯಕುಮಾರ್ ತಿಳಿಸಿದ್ದಾರೆ.

ಪ್ರಸ್ತುತ ಉಡುಪಿ ಸೈಂಟ್ ಸಿಸಿಲೀಸ್ ಕನ್ನಡ ಮಾಧ್ಯಮ ಶಾಲೆಯ 6ನೇ ತರಗತಿಯಲ್ಲಿ ಕಲಿಯುತ್ತಿರುವ ತನುಶ್ರೀ ಪಿತ್ರೋಡಿ, ಈವರೆಗೆ 398 ನೃತ್ಯ ಪ್ರದರ್ಶನವನ್ನು ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಇವರು 2017ರ ನವೆಂಬರ್‌ನಲ್ಲಿ ನಿರಾಲಾಂಭ ಪೂರ್ಣ ಚಕ್ರಾಸನ ಎಂಬ ಕಠಿಣ ಯೋಗಾಸನವನ್ನು ಒಂದು ನಿಮಿಷದಲ್ಲಿ 19 ಬಾರಿ ಮಾಡಿ ಮೊದಲ ವಿಶ್ವ ದಾಖಲೆ ಮಾಡಿದ್ದರು. ಅನಂತರ ಅವರು ಯೋಗಾಸನದ ಬೇರೆ ಬೇರೆ ಭಂಗಿಯಲ್ಲಿ ಮೂರು ವಿಶ್ವ ದಾಖಲೆ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ವೆಂಕಟರಮಣ ಸ್ಪೋರ್ಟ್ಸ್‌ನ ವಿಜಯ ಕೋಟ್ಯಾನ್, ರಾಘವೇಂದ್ರ ಶೇರಿಗಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News