ಓದಿನಿಂದ ಜ್ಞಾನಲೋಕ ವಿಸ್ತಾರ: ವಿವೇಕ ರೈ

Update: 2020-02-20 14:42 GMT

ಮಂಗಳೂರು, ಫೆ.20: ಓದು ಕಾಲಹರಣಕ್ಕಾಗಿ ಇರುವಂತದ್ದಲ್ಲ. ಅದು ನಮ್ಮ ಬದುಕನ್ನು ಬದಲಿಸುವ ಅಥವಾ ಬದುಕಿನಲ್ಲಿ ಹೊಸತನ ಮೂಡಿಸುವ ಮೂಲವಾಗಿರಬೇಕು. ಹಾಗಾಗಿ ಓದಿನಲ್ಲೂ ನಿಷ್ಠೆ ಬೇಕು. ಆಳವಾಗಿ ಮತ್ತು ಅಧ್ಯಯನ ರೂಪದಲ್ಲಿ ಓದಿದರೆ ಜ್ಞಾನ ಬೆಳೆಯಲಿದೆ. ಹೆಚ್ಚು ಓದಿದಂತೆ ಮನುಷ್ಯನ ಜ್ಞಾನಲೋಕವೂ ವಿಸ್ತಾರಗೊಳ್ಳಲಿದೆ ಎಂದು ಹಂಪಿ ವಿವಿಯ ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ್ ರೈ ಅಭಿಪ್ರಾಯಪಟ್ಟರು.

ನಗರದ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ‘ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ವಿದ್ಯಾರ್ಥಿಗಳು ಎಲ್ಲ ಕ್ಷೇತ್ರಗಳ ಕುರಿತ ಪುಸ್ತಕಗಳನ್ನು ಓದಬೇಕು. ಓದುವ ಆಸಕ್ತಿ ಹೊಂದಿದರೆ ಸಾಹಿತ್ಯಿಕವಾಗಿಯೂ ವ್ಯಕ್ತಿ ಬೆಳೆಯಬಲ್ಲ. ಓದುವುದು ಮತ್ತು ಹಿರಿಯರಿಂದ ಕಲಿಯುವುದು ಹಾಗೂ ಕಿರಿಯರೊಂದಿಗೆ ಒಡನಾಟ, ಪ್ರಾಮಾಣಿಕತೆ ಬದುಕಿನಲ್ಲಿ ಹೊಸ ಆಯಾಮ ಸೃಷ್ಟಿಸಬಲ್ಲುದು ಎಂದು ಡಾ.ಬಿ.ಎ.ವಿವೇಕ ರೈ ನುಡಿದರು.

ಸರಕಾರಗಳು ವಿಶ್ವವಿದ್ಯಾನಿಲಯಗಳಿಗೆ ಕೇವಲ ಅನುದಾನ ಒದಗಿಸಿದರೆ ಸಾಲದು. ಆ ವಿವಿಗಳನ್ನು ಉತ್ತಮ ಸೌಲಭ್ಯ ನೀಡಿ ಪ್ರೋತ್ಸಾಹಿಸ ಬೇಕು. ರಾಜ್ಯದಲ್ಲಿ 26 ವಿವಿಗಳು ಕಾರ್ಯನಿರ್ವಹಿಸುತ್ತಿದ್ದರೂ, ಖಾಯಂ ಶಿಕ್ಷಕ ವೃಂದ ಇಲ್ಲದೆ ಸಮಸ್ಯೆ ಅನುಭವಿಸುವಂತಾಗಿದೆ ಎಂದು ವಿವೇಕ ರೈ ವಿಷಾದಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ. ರಾಜಶೇಖರ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ. ನರಸಿಂಹ ಮೂರ್ತಿ ಅವರು ಸಾಧಕ ವಿವೇಕ್ ರೈಯ ಪರಿಚಯ ಮಾಡಿದರು. ಕಾಲೇಜಿನ ಉಪ ಪ್ರಾಂಶುಪಾಲ ಡಾ. ಶಿವರಾಮ್, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಪ್ರಕಾಶ್ ಚಂದ್ರ ಶಿಶಿಲ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News