51 ಪರೀಕ್ಷಾ ಕೇಂದ್ರಗಳಲ್ಲಿ 34,346 ವಿದ್ಯಾರ್ಥಿಗಳು: ಡಿಸಿ ಸಿಂಧೂ

Update: 2020-02-20 15:07 GMT

ಮಂಗಳೂರು, ಫೆ.20: ದ್ವಿತೀಯ ಪಿಯುಸಿ ಪರೀಕ್ಷೆಯು ಮಾರ್ಚ್ ತಿಂಗಳಿನಲ್ಲಿ ನಡೆಯಲಿದ್ದು, 51 ಪರೀಕ್ಷಾ ಕೇಂದ್ರಗಳಲ್ಲಿ 34,346 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ ಎಂದು ದ. ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ ಪೂರ್ವ ಸಿದ್ಧತೆ ಸಭೆಯಲ್ಲಿ ಮಾತನಾಡಿದ ಅವರು, ಪರೀಕ್ಷೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಒಟ್ಟು 51 ಪರೀಕ್ಷಾ ಕೇಂದ್ರಗಳು ಒಳಗೊಂಡಿದೆ. ಮಂಗಳೂರು ತಾಲೂಕಿನಲ್ಲಿ 24 ಪರೀಕ್ಷೆ ಕೇಂದ್ರ, ಮೂಡುಬಿದಿರೆಯಲ್ಲಿ ನಾಲ್ಕು ಪರೀಕ್ಷೆ ಕೇಂದ್ರ, ಬಂಟ್ವಾಳ ತಾಲೂಕಿನಲ್ಲಿ ಏಳು ಪರೀಕ್ಷೆ ಕೇಂದ್ರ, ಪುತ್ತೂರು ತಾಲೂಕಿನಲ್ಲಿ ಒಂಬತ್ತು ಪರೀಕ್ಷೆ ಕೇಂದ್ರ, ಬೆಳ್ತಂಗಡಿ ತಾಲೂಕಿನಲ್ಲಿ ನಾಲ್ಕು ಪರೀಕ್ಷೆ ಕೇಂದ್ರ, ಸುಳ್ಯ ತಾಲೂಕಿನಲ್ಲಿ ಮೂರು ಪರೀಕ್ಷೆ ಕೇಂದ್ರಗಳಿವೆ.

ಪರೀಕ್ಷೆ ಬರೆಯಲು ಒಟ್ಟು 34,346 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಈ ಪೈಕಿ 17,137 ಬಾಲಕರು ಮತ್ತು 17,209 ಬಾಲಕಿಯರು ಪರೀಕ್ಷೆಗಳನ್ನು ಎದುರಿಸಲಿದ್ದಾರೆ. ಕಲಾ ವಿಭಾಗದಲ್ಲಿ 4,532 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 16,237 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 13,577 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಸಹಾಯಕ ಆಯುಕ್ತ ಮದನ್‌ಮೋಹನ್, ಡಿಡಿಪಿಯು ವಿಷ್ಣುಮೂರ್ತಿ, ಡಿಡಿಪಿಐ ಮಲ್ಲೇಶಪ್ಪ, ಇಲಾಖೆಯ ಅಧಿಕಾರಿಗಳು, ಕಾಲೇಜು ಮುಖ್ಯಸ್ಥರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News