ಶರಣರ ಸಂದೇಶಗಳು ಸದಾ ದಾರಿದೀಪ: ಸದಾಶಿವ ಪ್ರಭು

Update: 2020-02-20 15:14 GMT

ಉಡುಪಿ, ಫೆ.20: ಕಾಯಕ ಶರಣರ ಆಚರಣೆಗಳು ಯಾವುದೇ ಒಂದು ಜಾತಿ, ಜನಾಂಗ, ವರ್ಗಕ್ಕೆ ಸೀಮಿತವಾಗಿಲ್ಲ. ಇವರ ಸಂದೇಶಗಳು ನಮಗೆ ಇಂದಿಗೂ ದಾರಿದೀಪವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹೇಳಿದ್ದಾರೆ.

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ವತಿಯಿಂದ ನಡೆದ ಸಂತಕವಿ ಶ್ರೀಸರ್ವಜ್ಞ ಜಯಂತಿ ಹಾಗೂ ಕಾಯಕ ಶರಣರ ಜಯಂತಿ ಆಚರಣೆಯಲ್ಲಿ, ಸರ್ವಜ್ಞ ಮತ್ತು ಕಾಯಕ ಶರಣರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡುತಿದ್ದರು.

ಶರಣರು ಅಂದು ನುಡಿದ ವಿಚಾರಗಳು ಇಂದಿಗೂ ಪ್ರಸ್ತುತ. ಸರ್ವಜ್ಞನ ವಚನಗಳು ಇಂದಿಗೂ ಅಜರಾಮರವಾಗಿದ್ದು, ಸಮಾಜಕ್ಕೆ ಶಿವಶರಣರ ಕೊಡುಗೆ ಅಪಾರ.ಅವರ ಅರ್ಥಪೂರ್ಣವಾದ ತತ್ವ ಆದರ್ಶ ವಿಚಾರ ಹಾಗೂ ಸಂದೇಶಗಳನ್ನು ಪ್ರತಿಯೊಬ್ಬರು ಬದುಕಿನಲ್ಲಿ ಮೈಗೂಡಿಸಿಕೊಳ್ಳ ಬೇಕು ಎಂದರು.

ಹಿರಿಯಡ್ಕ ಸರಕಾರಿ ಪದವಿ ಪೂರ್ವ ಕಾಲೇಜಿನ ನಳಿನಿ ದೇವಿ ಮಾತನಾಡಿ, ಶರಣರು ಶಿವನ ಸೇವೆಗೆ ಮೀಸಲಾಗಿಟ್ಟವರು. ಕಾಯಕ ಶರಣರು ಕಾಯಕಕ್ಕೆ ಮೀಸಲಾಗಿಟ್ಟವರು.ಕಾಯಕ ಶರಣರನ್ನು ಸಮಾಜದ ಯಾವುದೇ ಮೇಲ್ವರ್ಗದ ಜಾತಿಗಳು ತಮ್ಮ ಜೊತೆ ಸೇರಿಸಿಕೊಳ್ಳುತ್ತಿರಲಿಲ್ಲ. ಆದರೆ ಬಸವಣ್ಣನಂತಹ ಮಹಾನ್ ಜ್ಞಾನಿ ಕಾಯಕ ಶರಣರ ಬಾಳಿಗೆ ಬೆಳಕಾದವರು ಎಂದರು.

ಇಂದು ಕಾಯಕ ಶರಣರ ವಚನಗಳು ಹಾಡು, ಪದ್ಯ-ಗದ್ಯದ ರೂಪದಲ್ಲಿ ಹೊರಬಂದಿವೆ. ಈ ವಚನಗಳಲ್ಲಿ ಸಮಾಜ ಸುಧಾರಣೆ, ದೈವಭಕ್ತಿ, ಸಮಾಜದ ಜನರು ಯಾವ ರೀತಿಯಲ್ಲಿ ಜೀವನ ನಡೆಸಬೇಕು, ಆಸೆ- ಆಕಾಂಕ್ಷೆಗಳಿಂದ ಹೇಗೆ ದೂರವಿರಬೇಕೆಂದು, ಅತಿಯಾಸೆ ಪಡಬಾರದೆಂದು ಹಲವು ಸಂದೇಶ ಗಳನ್ನು ಒಳಗೊಂಡಿದೆ ಎಂದರು.

ಸರ್ವಜ್ಞರು ತಾನು ಕಂಡದ್ದನ್ನು ಕಂಡ ಹಾಗೇ ಖಂಡಿಸಿ ಹೇಳುತಿದ್ದವರು ಹಾಗೂ ಸಮಾಜ ಸುಧಾರಣೆಗೆ ಸಾಕಷ್ಟು ಹೋರಾಡಿದವರು. ಸಾಹಿತ್ಯ ಲೋಕಕ್ಕೆ ಇವರು ಮರೆಯಲಾಗದ ಗಣಿ. ಸರ್ವಜ್ಞನ ವಚನಗಳು ಸರ್ವವ್ಯಾಪಿಯಾಗಿದ್ದು, ಸುಮಾರು ಒಂದು ಸಾವಿರಕ್ಕಿಂತಲೂ ಅಧಿಕ ಬರಹಗಳು ಸಂಶೋಧನೆಯಲ್ಲಿ ಲ್ಯವಾಗಿದೆ ಎಂದ ನಳಿನಿ ದೇವಿ, ಕಾಯಕ ಶರಣರಾದ ಮಾದರ ಚೆನ್ನಯ್ಯ, ಮಾದರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗ ಪೆದ್ದಿ ಕಾಯಕ ಶರಣರ ತತ್ವಗಳ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕುಲಾಲ್ ಸಂಘದ ಅಧ್ಯಕ್ಷ ಐತು ಕುಲಾಲ್, ಸಮಾಜದ ಮುಖಂಡರಾಗಿರುವ ಶೇಖರ್ ಕುಲಾಲ್, ರಾಮು ಕುಲಾಲ್, ಸಂತೋಷ್ ಕುಲಾಲ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿ, ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News