ಕವಿ ಮುದ್ದಣರ ಗ್ರಂಥಗಳ ಅಧ್ಯಯನದಿಂದ ಅಪಾರ ಜ್ಞಾನ: ಹಿರಿಯ ಅದಮಾರು ಶ್ರೀ

Update: 2020-02-20 16:39 GMT

ಉಡುಪಿ, ಫೆ.20: ಹಿಂದಿನ ಕವಿಗಳಿಂದ ಈಗಿನ ಕವಿಗಳು ಕಲಿಯ ಬೇಕಾದುದು ತುಂಬಾ ಇದೆ. ಆದುದರಿಂದ ವಿದ್ಯಾರ್ಥಿಗಳು ಕವಿ ಮುದ್ದಣ ಅವರ ಜೀವನ ಚರಿತ್ರೆಯನ್ನು ಹಾಗೂ ಅವರು ಬರೆದಿರುವ ಗ್ರಂಥಗಳನ್ನು ಅಧ್ಯಯನ ಮಾಡುವ ಮೂಲಕ ಲೌಕಿಕ ಮತ್ತು ಆಧ್ಯಾತ್ಮಿಕ ಜ್ಞಾನ ಪಡೆಯಬೇಕು ಎಂದು ಉಡುಪಿ ಶ್ರೀಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗ ಹಾಗೂ ಕವಿ ಮುದ್ದಣ 150ನೆ ವರ್ಷಾಚರಣಾ ಸಮಿತಿ ಸಹಯೋಗ ಮತ್ತು ಕಾಲೇಜಿನ ಆತಂರಿಕ ಗುಣಮಟ್ಟ ಖಾತರಿ ಘಟಕದ ಮಾರ್ಗದರ್ಶನ ದಲ್ಲಿ ಗುರುವಾರ ಕಾಲೇಜಿನ ಮಿನಿ ಸಭಾಂಗಣದಲ್ಲಿ ಆಯೋಜಿಸಲಾದ ಮುದ್ದಣ -150 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮುಖ್ಯ ಅತಿಥಿಯಾಗಿ ನಿವೃತ್ತ ಪ್ರಾಂಶುಪಾಲ, ಹವ್ಯಾಸಿ ಯಕ್ಷಗಾನ ಕಲಾ ವಿದ ಪ್ರೊ.ಎಂ.ಎಲ್.ಸಾಮಗ ಮಾತನಾಡಿ, ಯಕ್ಷಗಾನ ಪ್ರಸಂಗ ಗಳನ್ನು ಸಾಹಿತ್ಯ ಎಂಬುದಾಗಿ ಒಪ್ಪಿಕೊಳ್ಳುತ್ತಿಲ್ಲ ಎಂಬ ಕೊರಗು ಕೇಳಿಬರುತ್ತಿದೆ. ಕವಿ ಮುದ್ದಣ ಬರೆದಿರುವ ರತ್ನಾವತಿ ಕಲ್ಯಾಣ ಮತ್ತು ಕುಮಾರ ವಿಜಯ ಯಕ್ಷಗಾನ ಪ್ರಸಂಗಗಳು, ಸಾಹಿತ್ಯಿಕ ವೌಲ್ಯ ಹೊಂದಿದೆ ಎಂಬುದಕ್ಕೆ ದೊಡ್ಡ ಆಧಾರ ವಾಗಿದೆ. ಅದರ ಸಾಹಿತ್ಯ ಪ್ರಬುದ್ಧತೆ, ಭಾಷಾ ಸೌಂದರ್ಯ ವಿಶಿಷ್ಟವಾಗಿದೆ ಎಂದು ತಿಳಿಸಿದರು.

ಕಾಲೇಜಿನ ಆಡಳಿತ ಮಂಡಳಿಯ ಗೌರವ ಕೋಶಾಧಿಕಾರಿ ಪ್ರದೀಪ್ ಕುಮಾರ್ ಮಾತನಾಡಿ, ಸಾಹಿತ್ಯದಿಂದ ದೇಶದಲ್ಲಿ ಸಂಸ್ಕೃತಿ, ಸಂಸ್ಕಾರ ಬೆಳೆ ಯಲು ಸಾಧ್ಯವಾಗುತ್ತದೆ. ಮಾನವೀಯತೆ ಮರೆಯಾಗುತ್ತಿರುವ, ರಾಜಕೀಯ ತತ್ವ ಸಿದ್ಧಾಂತಗಳು ಕುಸಿಯುತ್ತಿರುವ ಇಂತಹ ಕಾಲಘಟ್ಟ ದಲ್ಲಿ ಹೆಚ್ಚು ಹೆಚ್ಚು ಕವಿಗಳು ಹುಟ್ಟಿ ಬರಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ರಾಘವೇಂದ್ರ ಎ. ವಹಿಸಿ ದ್ದರು. ಕವಿ ಮುದ್ದಣ 150ನೆ ವರ್ಷಾಚರಣಾ ಸಮಿತಿಯ ನಂದಳಿಕೆ ಬಾಲ ಚಂದ್ರ ರಾವ್ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ಸಿದ್ಧಾಪುರ ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಡಾ.ಪ್ರಜ್ಞಾ ಮಾರ್ಪಳ್ಳಿ ವಂದಿಸಿದರು. ಉಪನ್ಯಾಸಕ ಶಿವ ಕುಮಾರ್ ಬಿ.ಎ.ಅಳಗೋಡು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News