ಹಿಂದೂ ಬಾಲಕಿಯ ವಿವಾಹ ಅಸಿಂಧುಗೊಳಿಸಿದ ನ್ಯಾಯಾಲಯ
Update: 2020-02-20 23:39 IST
ಕರಾಚಿ, ಫೆ. 20: ಪಾಕಿಸ್ತಾನದ ಅಪ್ರಾಪ್ತ ವಯಸ್ಸಿನ ಹಿಂದೂ ಬಾಲಕಿಯೊಬ್ಬರ ವಿವಾಹವನ್ನು ಕರಾಚಿಯ ನ್ಯಾಯಾಲಯವೊಂದು ಅಸಿಂಧುಗೊಳಿಸಿದೆ. ಸಿಂಧ್ ಪ್ರಾಂತದಲ್ಲಿ ವ್ಯಕ್ತಿಯೊಬ್ಬ ಬಾಲಕಿಯನ್ನು ಅಪಹರಿಸಿ ಮತಾಂತರಗೊಳಿಸಿ ಬಲವಂತವಾಗಿ ವಿವಾಹವಾಗಿದ್ದನು ಎಂದು ಆರೋಪಿಸಲಾಗಿತ್ತು.
ಒಂಭತ್ತನೇ ತರಗತಿಯ ಬಾಲಕಿ ಮೇಹಕ್ ಕುಮಾರಿಯನ್ನು ಆರೋಪಿ ಅಲಿ ರಝ ಜನವರಿ 15ರಂದು ಅಪಹರಿಸಿ, ಬಳಿಕ ಬಲವಂತದಿಂದ ಮದುವೆಯಾಗಿದ್ದಾನೆ ಎಂದು ಬಾಲಕಿಯ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ. ಅಪಹರಣದ ವೇಳೆ ತನ್ನ ಮಗಳಿಗೆ ಕೇವಲ 15 ವರ್ಷ ಎಂದು ಅವರು ಹೇಳಿದ್ದಾರೆ.
ಬಾಲಕಿ ಅಪ್ರಾಪ್ತ ವಯಸ್ಕಳಾಗಿದ್ದಾಳೆ ಎಂದು ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಗುಲಾಮ್ ಅಲಿ ಕನಸ್ರು ತೀರ್ಪು ನೀಡಿದ್ದಾರೆ. ಬಾಲ್ಯ ವಿವಾಹವನ್ನು ನೆರವೇರಿಸಿದ, ನೆರವು ನೀಡಿದ ಮತ್ತು ಪ್ರಚೋದನೆ ನೀಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನ್ಯಾಯಾಧೀಶರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.