×
Ad

ದೇವಸ್ಥಾನದ ಕಾಣಿಕೆ ಡಬ್ಬಿ ಕಳವು: ದೂರು ದಾಖಲು

Update: 2020-02-20 23:44 IST

ಬಂಟ್ವಾಳ, ಫೆ.20: ದೇವಸ್ಥಾನವೊಂದರ ಕಾಣಿಕೆ ಡಬ್ಬಿ ಕಳವುಗೈದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯ ಲ್ಲಿ ದೂರು ದಾಖಲಾಗಿದೆ.

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವೀರಕಂಬ ಗ್ರಾಮದ ಕೆಲಿಂಜ ಉಳ್ಳಾಲ್ತಿ ದೇವಸ್ಥಾನದ ತಾಮ್ರದ ಕಾಣಿಕೆ ಡಬ್ಬಿ ಕಳವು ಅಗಿರುವ ಬಗ್ಗೆ ದೇವಸ್ಥಾನದ ಆಡಳಿತ ಮೋಕ್ತೇಸರ ಪುಂಡಿಕಾಯಿ ಶಂಕರನಾರಾಯಣ ಭಟ್ ಠಾಣೆಗೆ ದೂರು ನೀಡಿದ್ದಾರೆ.

ಫೆ.15ರಂದು ಕಾಣಿಕೆ ಡಬ್ಬಿ ಕಳವು ಆಗಿದ್ದು ಫೆ.19ರಂದು ಅವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ಸಿ‌ಸಿ ಟಿವಿ ದೃಶ್ಯ ವೈರಲ್: ವ್ಯಕ್ತಿಯೋರ್ವ ಕಾಣಿಕೆ ಡಬ್ಬಿ ಕಳವುಗೈದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಅದು ಈಗ ವೈರಲ್ ಆಗಿದೆ. ಫೆ.14ರಂದು ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ನಡೆದಿದ್ದು ಮರುದಿನ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ನಡೆದಿತ್ತು.‌ ಈ ಸಂದರ್ಭದಲ್ಲಿ ಗೋಣಿಚೀಲದೊಂದಿಗೆ ಬಂದ ವ್ಯಕ್ತಿಯೋರ್ವ ದೇವಸ್ಥಾನದ ಮೆಟ್ಟಿಲಿಗೆ ಕೈ ಮುಗಿಯುವ ನಾಟಕ ಮಾಡಿ ಅಡ್ಡ ಬಿದ್ದಿದ್ದಾನೆ.‌ ಆ ವೇಳೆ ಅಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಮತ್ತೋರ್ವ ವ್ಯಕ್ತಿ ಅಲ್ಲಿಂದ ಹೋದ ಕೂಡಲೇ ಮೆಟ್ಟಿಲಿಗೆ ಅಡ್ಡ ಬಿದ್ದ ವ್ಯಕ್ತಿ ಮೆಟ್ಟಿಲಿನಲ್ಲಿದ್ದ ಕಾಣಿಕೆ ಡಬ್ಬಿಯನ್ನು ಗೋಣಿ ಚೀಲಕ್ಕೆ ತುಂಬಿಸಿ ಪರಾರಿಯಾಗುವ ದೃಶ್ಯ ಸಿ‌ಸಿ ಟಿವಿಯಲ್ಲಿ ಸೆರೆಯಾಗಿದೆ.

ಕಳವಾದ ಕಾಣಿಕೆ ಡಬ್ಬಿಯಲ್ಲಿ ಸುಮಾರು 20 ಸಾವಿರ ರೂ.ನಿಂದ 22 ಸಾವಿರ ರೂ. ವರಗೆ ಹಣ ಇರಬಹುದು ಎಂದು ದೂರಿನಲ್ಲಿ ತಿಳಿಸಲಾಗಿದೆ. ಸ್ಥಳಕ್ಕೆ ವಿಟ್ಲ ಠಾಣಾ ಎಸ್ಸೈ ವಿನೋದ್ ಹಾಗೂ ಸಿಬ್ಬಂದಿ ಭೇಟಿ ನೀಡಿ‌ ಪರಿಶೀಲನೆ ನಡೆಸಿದ ಬಳಿಕ ಪ್ರಕರಣ ದಾಖಲಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News