ಅಹ್ಮದಾಬಾದ್‌ನ ‘ನಮಸ್ತೆ ಟ್ರಂಪ್’ ನಲ್ಲಿ ವೈವಿದ್ಯಮಯ ಸಂಸ್ಕೃತಿಯ ಪ್ರದರ್ಶನ: ಸರಕಾರ

Update: 2020-02-21 04:02 GMT

ಸರಕಾರ ಹೊಸದಿಲ್ಲಿ, ಫೆ.20: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡು ದಿನಗಳ ಭೇಟಿಗಾಗಿ ಫೆ.24ರಂದು ಭಾರತಕ್ಕೆ ಆಗಮಿಸಲಿದ್ದು,ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ಟ್ರಂಪ್ ಅವರ ಮೊದಲ ಭಾರತ ದರ್ಶನದ ನೋಟವಾಗಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಗುರುವಾರ ತಿಳಿಸಿದೆ.

 ಟ್ರಂಪ್ ಅವರ ಭಾರತ ಭೇಟಿಯ ಮೂರು ತಾಣಗಳಲ್ಲಿ ಮೊದಲನೆಯದಾದ ಅಹ್ಮದಾಬಾದ್‌ನಲ್ಲಿ ಅಮೆರಿಕದ ಅಧ್ಯಕ್ಷರ ಸ್ವಾಗತಕ್ಕಾಗಿ ಆಯೋಜಿಸಲಾಗಿರುವ ಭವ್ಯ ಕಾರ್ಯಕ್ರಮ ‘ನಮಸ್ತೆ ಟ್ರಂಪ್’ ಭಾರತದ ಶ್ರೀಮಂತ ಮತ್ತು ವೈವಿಧ್ಯಪೂರ್ಣ ಸಂಸ್ಕೃತಿಯನ್ನು ಪ್ರದರ್ಶಿಸಲಿದೆ. ಭಾರತ ಅಥವಾ ಇತರ ಕಡೆಗಳಲ್ಲಿಯ ಕೆಲವೇ ಕಾರ್ಯಕ್ರಮಗಳನ್ನು ‘ನಮಸ್ತೆ ಟ್ರಂಪ್’ ಕಾರ್ಯಕ್ರಮಕ್ಕೆ ಹೋಲಿಸಬಹುದು ಎಂದು ಹೇಳಿದೆ.

 ಮಧ್ಯಾಹ್ನ ಅಹ್ಮದಾಬಾದ್ ತಲುಪುವ ಟ್ರಂಪ್ ಅಲ್ಲಿಂದ ಮೊಟೆರಾ ಸ್ಟೇಡಿಯಮ್‌ಗೆ ತೆರಳಿ ಅಮೆರಿಕದ ಹ್ಯೂಸ್ಟನ್‌ನಲ್ಲಿ ನಡೆದಿದ್ದ ‘ಹೌಡಿ ಮೋದಿ’ ಮಾದರಿಯ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ. ವಿಮಾನ ನಿಲ್ದಾಣದಿಂದ ಸ್ಟೇಡಿಯಮ್‌ವರೆಗಿನ ರಸ್ತೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರುವುದನ್ನು ನಿರೀಕ್ಷಿಸಲಾಗಿದೆ ಎಂದು ಮೋದಿ ಮತ್ತು ಟ್ರಂಪ್ ಅವರ ರೋಡ್ ಶೋ ಅನ್ನು ಪ್ರಸ್ತಾಪಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದರು. ತಾನು ಈ ಕಾರ್ಯಕ್ರಮದಲ್ಲಿ 70 ಲಕ್ಷ ಜನರ ಉಪಸ್ಥಿತಿಯನ್ನು ನಿರೀಕ್ಷಿಸಿರುವುದಾಗಿ ಟ್ರಂಪ್ ಹೇಳಿಕೊಂಡಿದ್ದಾರೆ.

 ‘ರೋಡ್ ಶೋ ನಡೆಯುವ ರಸ್ತೆಯುದ್ದಕ್ಕೂ ದೇಶದ ವಿವಿಧ ಭಾಗಗಳನ್ನು ಪ್ರತಿನಿಧಿಸುವ 28 ವೇದಿಕೆಗಳನ್ನು ಸ್ಥಾಪಿಸಲಾಗಿದ್ದು,ಕಲಾವಿದರು ಕಾರ್ಯಕ್ರಮಗಳನ್ನು ನೀಡಲಿದ್ದಾರೆ. ರೋಡ್ ಶೋ ಮಹಾತ್ಮಾ ಗಾಂಧಿಯವರ ಜೀವನವನ್ನೂ ಬಿಂಬಿಸಲಿದೆ. ಟ್ರಂಪ್ ಅವರನ್ನು ಸ್ವಾಗತಿಸಲು ಸ್ಟೇಡಿಯಂ ಹೊರಗೂ ಭಾರೀ ಸಂಖ್ಯೆಯಲ್ಲಿ ಜನರನ್ನು ನಾವು ನಿರೀಕ್ಷಿಸಿದ್ದೇವೆ ’ಎಂದ ಕುಮಾರ್,ಇದು ಭಾರತಕ್ಕೆ ಟ್ರಂಪ್ ಅವರ ಮೊದಲ ಭೇಟಿಯಾಗಲಿದೆ ಮತ್ತು ಕಳೆದ ಎಂಟು ತಿಂಗಳಲ್ಲಿ ಐದನೇ ಬಾರಿಗೆ ಪ್ರಧಾನಿ ಮೋದಿಯವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದರು.

ಟ್ರಂಪ್ ಅಹ್ಮದಾಬಾದ್‌ನಿಂದ ಆಗ್ರಾಕ್ಕೆ ತೆರಳಿ ವಿಶ್ವವಿಖ್ಯಾತ ತಾಜ್‌ಮಹಲ್‌ನ್ನು ವೀಕ್ಷಿಸಲಿದ್ದಾರೆ. ಭಾರತ ಪ್ರವಾಸದ ತನ್ನ ಮೂರನೇ ಮತ್ತು ಕೊನೆಯ ಹಂತದಲ್ಲಿ ಟ್ರಂಪ್ ದ್ವಿಪಕ್ಷೀಯ ಮತ್ತು ನಿಯೋಗ ಮಟ್ಟದ ಮಾತುಕತೆಗಳು ನಡೆಯಲಿರುವ ದಿಲ್ಲಿಗೆ ಭೇಟಿ ನೀಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News