×
Ad

ಪೌರತ್ವ ಸಾಬೀತುಪಡಿಸಲು ವೋಟರ್ ಐಡಿ ಸಾಕಾಗುತ್ತದೆ ಎಂದು ಮತ್ತೊಮ್ಮೆ ಹೇಳಿದ ಮುಂಬೈ ಕೋರ್ಟ್

Update: 2020-02-21 13:49 IST

ಮುಂಬೈ : ಮತದಾರರ ಗುರುತು ಪ್ರಮಾಣಪತ್ರ  ಅಥವಾ ವೋಟರ್ಸ್ ಐಡಿ ಕಾರ್ಡ್ ಪೌರತ್ವ ಸಾಬೀತುಪಡಿಸಲು ಸಾಕಾಗುವ ದಾಖಲೆಯಾಗಿದೆ ಎಂದು ಇತ್ತೀಚೆಗೆ ತೀರ್ಪು ನೀಡಿರುವ ಮುಂಬೈ ನ್ಯಾಯಾಲಯ ಪೊಲೀಸರು `ಬಾಂಗ್ಲಾದೇಶಿ ನುಸುಳುಕೋರರು' ಎಂದು ಆರೋಪಿಸಿದ್ದ ಇಬ್ಬರನ್ನು  ಖುಲಾಸೆಗೊಳಿಸಿದೆ.

ಮುಂಬೈಯ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ನ್ಯಾಯಾಧೀಶ ಎಚ್. ಎಚ್. ಕಾಶೀಕರ್ ಫೆಬ್ರವರಿ 11ರಂದು ನೀಡಿದ ಆದೇಶದಲ್ಲಿ ಅಬ್ಬಾಸ್ ಶೇಖ್ ಮತ್ತವರ ಪತ್ನಿ ರಬಿಯಾ ಖತೂನ್ ಶೇಖ್ ಎಂಬಿಬ್ಬರನ್ನು ನಿರ್ದೋಷಿಗಳೆಂದು ಘೋಷಿಸಿದರು. ಪಾಸ್‍ ಪೋರ್ಟ್  ನಿಯಮಗಳ ಉಲ್ಲಂಘನೆಗಾಗಿ ಇಬ್ಬರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಆಧಾರ್, ಪಾನ್ ಕಾರ್ಡ್, ವಾಹನ ಚಾಲನಾ ಪರವಾನಿಗೆ ಹಾಗೂ ರೇಷನ್ ಕಾರ್ಡ್ ಅನ್ನು ಪೌರತ್ವ ಸಾಬೀತುಪಡಿಸುವ ದಾಖಲೆಯೆಂದು ಪರಿಗಣಿಸಲು ಸಾಧ್ಯವಾಗದೇ ಇದ್ದರೂ ಮತದಾರರ ಗುರುತುಪತ್ರ ಭಾರತೀಯ ಪೌರತ್ವವನ್ನು ಸಾಬೀತುಪಡಿಸಬಹುದು ಎಂದು ಹೇಳಿತು.

ಅಬ್ಬಾಸ್ ಶೇಖ್ ತನ್ನ ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತು ಪತ್ರ, ಪಾಸ್ ಬುಕ್, ಹೆಲ್ತ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಹಾಜರುಪಡಿಸಿದ್ದರೆ, ರಬಿಯಾ  ಆಧಾರ್ ಕಾರ್ಡ್, ಪಾನ್ ಕಾರ್ಡ್ ಹಾಗೂ ಮತದಾರರ ಗುರುತುಪತ್ರ ಹಾಜರು ಪಡಿಸಿದ್ದಳು.

"ಪೌರತ್ವ ಸಾಬೀತುಪಡಿಸಲು ಮತದಾರರ ಗುರುತುಪತ್ರ ಸಾಕು. ಇದಕ್ಕೆ  ಅರ್ಜಿ ಸಲ್ಲಿಸುವ ವೇಳೆ ಜನರ ಪ್ರತಿನಿಧಿತ್ವ ಕಾಯಿದೆಯನ್ವಯ ಫಾರ್ಮ್ 6ರನ್ವಯ ತಾನೊಬ್ಬ ಭಾರತೀಯ ನಾಗರಿಕ ಹಾಗೂ ಈ ಘೋಷಣೆ ಸುಳ್ಳೆಂದು ಕಂಡು ಬಂದರೆ ಶಿಕ್ಷೆಗೆ ಅರ್ಹ ಎಂಬ ಘೋಷಿಸಬೇಕಾಗಿದೆ'' ಎಂದು ನ್ಯಾಯಾಲಯ ಹೇಳಿದೆ.

ಫೆಬ್ರವರಿ 12ರಂದು ಗುಜರಾತ್ ಹೈಕೋರ್ಟ್ ತನ್ನ ಆದೇಶವೊಂದರಲ್ಲಿ ಮತದಾರರ ಗುರುತು ಪತ್ರ, ಪಾನ್ ಕಾರ್ಡ್, ಬ್ಯಾಂಕ್ ದಾಖಲೆಗಳು ಹಾಗೂ  ಭೂ ತೆರಿಗೆ ಪಾವತಿ ರಶೀದಿಗಳನ್ನು ಪೌರತ್ವ ಸಾಬೀತುಪಡಿಸುವ ದಾಖಲೆಗಳೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News