ಅಮೂಲ್ಯ ಹೆಸರು ಕೈಬಿಟ್ಟ ಮುಸ್ಲಿಂ ಐಕ್ಯತಾ ವೇದಿಕೆ

Update: 2020-02-21 14:34 GMT

ಮಂಗಳೂರು, ಫೆ.21: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ಎನ್‌ಆರ್‌ಸಿ, ಎನ್‌ಪಿಆರ್ ವಿರುದ್ಧದ ಪ್ರತಿಭಟನೆಯಲ್ಲಿ ಗೋಲಿಬಾರ್ ಗೆ ಬಲಿಯಾದ ನೌಶೀನ್ ಮತ್ತು ಅಬ್ದುಲ್ ಜಲೀಲ್ ಅವರ ಹುಟ್ಟೂರು ಕುದ್ರೋಳಿಯ ಟಿಪ್ಪುಸುಲ್ತಾನ್ ಗಾರ್ಡನ್‌ನಲ್ಲಿ ಫೆ. 25ರಂದು ಮಧ್ಯಾಹ್ನ 2 ಗಂಟೆಗೆ ಮುಸ್ಲಿಂ ಐಕ್ಯತಾ ವೇದಿಕೆಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ನಗರದ ಹೊಟೇಲ್‌ನಲ್ಲಿ ಶುಕ್ರವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಸ್ಲಿಂ ಐಕ್ಯತಾ ವೇದಿಕೆಯ ಅಧ್ಯಕ್ಷ, ಮಾಜಿ ಮೇಯರ್ ಕೆ. ಅಶ್ರಫ್, ಕೇಂದ್ರ ಸರಕಾರವು ಜಾರಿಗೊಳಿಸಿರುವ ಕರಾಳ ಕಾಯ್ದೆ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರುದ್ಧ ದೇಶಾದ್ಯಂತ ಪ್ರತಿಭಟನೆಯ ಧ್ವನಿ ಕೇಳಿ ಬರುತ್ತಿವೆ. ಜಾತಿ, ಧರ್ಮ ಭೇದ ಮರೆತು ಜನತೆಯು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ ಎಂದರು.

ಬ್ರಿಟೀಷರ ಗುಲಾಮತ್ವದಲ್ಲಿದ್ದ ದೇಶವನ್ನು ಸ್ವತಂತ್ರಗೊಳಿಸಲು ಹೋರಾಟ ರಂಗದಲ್ಲಿ ಪ್ರಾಣ ತ್ಯಾಗ ಮಾಡಿದ ಮುಸ್ಲಿಮರು ಇಂದು ದೇಶದ ಪ್ರಜೆಗಳು ಎನ್ನುವುದನ್ನು ಸಾಬೀತುಪಡಿಸುವ ಅಗತ್ಯವಿಲ್ಲ. ಕೇಂದ್ರದ ಸಂವಿಧಾನ ವಿರೋಧಿ, ಜನವಿರೋಧಿ, ಧರ್ಮಾಧಾರಿತ ತಾರತಮ್ಯ ನೀತಿಯು ಸಂವಿಧಾನವನ್ನು ಧಿಕ್ಕರಿಸಿದ ಕಾಯ್ದೆಯ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ ಕೇಂದ್ರಕ್ಕೆ ಎಚ್ಚರಿಕೆ ನೀಡುವ ಅಗತ್ಯವಿದೆ ಎಂದು ಹೇಳಿದರು.

ಮಂಗಳೂರು ಗೋಲಿಬಾರ್ ಮತ್ತು ನಂತರದ ಎಲ್ಲ ಊಹಾಪೋಹಗಳ ಬಗ್ಗೆ ನ್ಯಾಯಾಂಗ ತನಿಖೆ ಸಮಗ್ರವಾಗಿ ನಡೆಸಲು ರಾಜ್ಯ ಸರಕಾರದ ಗಮನ ಸೆಳೆಯುವಂತೆ ಮಾಡುವ ನಿಟ್ಟಿನಲ್ಲಿ ಫೆ.25ರಂದು ಮಧ್ಯಾಹ್ನ 2 ಗಂಟೆಗೆ ಕುದ್ರೋಳಿಯಲ್ಲಿ ಸಮಾವೇಶ ನಡೆಯಲಿದೆ. ಮಂಗಳೂರು ಗೋಲಿಬಾರ್‌ನಲ್ಲಿ ಮೃತಪಟ್ಟ ನೌಶೀನ್ ಹಾಗೂ ಅಬ್ದುಲ್ ಜಲೀಲ್ ಅವರ ಕುಟುಂಬದವರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಸಮಾರಂಭದಲ್ಲಿ ಶಾಸಕ ಯು.ಟಿ.ಖಾದರ್, ದ.ಕ. ಮತ್ತು ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್.ಮುಹಮ್ಮದ್ ಮಸೂದ್, ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ, ಬಿ.ಆರ್. ಭಾಸ್ಕರ್ ಪ್ರಸಾದ್, ರಾ ಚಿಂತನ್, ಸುಧೀರ್ ಕುಮಾರ್ ಮುರೊಳ್ಳಿ, ನಜ್ಮಾ ನಝೀರ್ ಚಿಕ್ಕನೇರಳೆ, ಇಲ್ಯಾಸ್ ತುಂಬೆ, ಎಚ್.ಐ. ಸುಫಿಯಾನ್ ಸಖಾಫಿ ಕಾವಲಕಟ್ಟೆ, ಕೆ.ಎಂ. ಇಕ್ಬಾಲ್ ಬಾಳಿಲ, ಎ.ಕೆ. ಕುಕ್ಕಿಲ, ಎಂ.ಜಿ. ಮುಹಮ್ಮದ್, ರಫೀವುದ್ದೀನ್ ಕುದ್ರೋಳಿ ಸಹಿತ ಸಾಮಾಜಿಕ ಹೋರಾಟಗಾರರು, ಪ್ರಗತಿಪರ ಚಿಂತಕರು, ವಿವಿಧ ಸಂಘಟನೆಗಳ ಮುಖಂಡರು, ಸಮಾನ ಮನಸ್ಕ ನಾಗರಿಕರು ಭಾಗವಹಿಸಲಿದ್ದಾರೆ.

ಪಾರ್ಕಿಂಗ್ ವ್ಯವಸ್ಥೆ: ಪ್ರತಿ ತಾಲೂಕಿನಲ್ಲೂ ಸಿಎಎ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಅದರಂತೆ ಬಂದರ್, ಕುದ್ರೋಳಿ, ಕಂದಕ್ ಸಹಿತ ಐದು ಮಸೀದಿಗಳ ಜಮಾಅತ್‌ನಿಂದ ಸಮಿತಿ ರಚಿಸಿಕೊಂಡು ಮುಸ್ಲಿಂ ಐಕ್ಯತಾ ವೇದಿಕೆ ರಚಿಸಲಾಗಿದೆ. ಕುದ್ರೋಳಿಯ ಟಿಪ್ಪುಸುಲ್ತಾನ್ ಗಾರ್ಡನ್‌ನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ನಾಲ್ಕೂವರೆ ಎಕರೆ ವಿಸ್ತೀರ್ಣದ ಗಾರ್ಡನ್‌ನಲ್ಲಿ ಸುಮಾರು 5000ಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದೆ. ವಿಶಾಲವಾದ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕೆ.ಅಶ್ರಫ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮುಸ್ಲಿಂ ಐಕ್ಯತಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಂ.ಅಬ್ದುಲ್ ಅಝೀಝ್ ಕುದ್ರೋಳಿ, ಕೋಶಾಧಿಕಾರಿ ಮಕ್ಬೂಲ್ ಅಹ್ಮದ್, ಉಪಾಧ್ಯಕ್ಷರಾದ ಬಿ.ಅಬೂಬಕರ್, ಪಝಲ್ ಮುಹಮ್ಮದ್, ನಾಸಿರುದ್ದೀನ್ ಹೈಕೊ, ಶಂಸುದ್ದೀನ್ ಎಚ್.ಟಿ., ಕಾರ್ಯದರ್ಶಿಗಳಾದ ಮುಝೈರ್ ಅಹ್ಮದ್, ಮುಹಮ್ಮದ್ ಹಾರಿಸ್, ಅಶ್ರಫ್ ಕಿನಾರ, ಸದಸ್ಯರಾದ ಕೆ.ಕೆ. ಲತೀಫ್, ಮುಹಮ್ಮದ್ ಯಾಸೀನ್, ಎನ್.ಕೆ. ಅಬೂಬಕರ್, ಅಬ್ದುಲ್ ವಹಾಬ್, ಅಬ್ದುಲ್ ರಹ್ಮಾನ್, ಎಸ್.ಎ. ಖಲೀಲ್, ಇಕ್ಬಾಲ್ ಕಂಡತ್‌ಪಳ್ಳಿ, ಅಬ್ದುಲ್ ಲತೀಫ್, ಮಕ್ಬೂಲ್ ಅಹ್ಮದ್, ಮುಸ್ತಾಕ್, ಇಸ್ಮಾಯೀಲ್ ಬಿ.ಎ. ಉಪಸ್ಥಿತರಿದ್ದರು.

ಪಾಕ್ ಪರ ಘೋಷಣೆಗೆ ಖಂಡನೆ

ಮಂಗಳೂರಿನ ಕುದ್ರೋಳಿಯ ಟಿಪ್ಪುಸುಲ್ತಾನ್ ಗಾರ್ಡನ್‌ನಲ್ಲಿ ನಡೆಯುವ ಸಿಎಎ ವಿರುದ್ಧದ ಬೃಹತ್ ಪ್ರತಿಭಟನಾ ಸಮಾವೇಶಕ್ಕಾಗಿ ಅಮೂಲ್ಯ ಲಿಯೊನ್ ಳನ್ನು ಆಹ್ವಾನಿಸಿ, ಆಮಂತ್ರಣ ಮುದ್ರಿಸಲಾಗಿತ್ತು. ಬೆಂಗಳೂರಿನ ಸಮಾವೇಶವೊಂದರಲ್ಲಿ ಪಾಕಿಸ್ತಾನ ಝಿಂದಾಬಾದ್ ಘೋಷಣೆ ಕೂಗಿದ್ದ ಹಿನ್ನೆಲೆಯಲ್ಲಿ ಆಕೆಯ ಆಹ್ವಾನವನ್ನು ರದ್ದುಪಡಿಸಿದ್ದೇವೆ. ಆಮಂತ್ರಣದಲ್ಲೂ ಹೆಸರನ್ನು ತೆಗೆದು ಹೊಸ ಆಮಂತ್ರಣ ಮುದ್ರಿಸಲಾಗಿದೆ. ಅಮೂಲ್ಯಳಿಗೆ ವಿಮಾನದ ಟಿಕೆಟ್‌ನ್ನು ಕಾಯ್ದಿರಿಸಲಾಗಿತ್ತು. ಟಿಕೆಟ್‌ನ್ನೂ ರದ್ದುಗೊಳಿಸಲಾಗಿದೆ. ದೇಶದಲ್ಲಿ ಇದ್ದುಕೊಂಡು ಪಾಕ್ ಜೈಕಾರ ಕೂಗುವುದನ್ನು ಎಂದಿಗೂ ಸಹಿಸುವುದಿಲ್ಲ ಎಂದು ಮುಸ್ಲಿಂ ಐಕ್ಯತಾ ವೇದಿಕೆಯ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಕೆ.ಅಶ್ರಫ್ ಸ್ಪಷ್ಟಪಡಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News