ಫೆ.24ರಿಂದ ವಿವಿಧ ಜಾನಪದ ಪ್ರಕಾರಗಳ ತರಬೇತಿ ಶಿಬಿರ

Update: 2020-02-21 14:06 GMT

ಉಡುಪಿ, ಫೆ.21: ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಇವರ ಸಹಯೋಗದೊಂದಿಗೆ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಹಾಗೂ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಗಿರಿಜನ ಉಪಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡದ ಶಿಬಿರಾರ್ಥಿಗಳಿಗೆ ವಿವಿಧ ಜಾನಪದ ಪ್ರಕಾರಗಳ ತರಬೇತಿ ಶಿಬಿರವು ಫೆ.24 ರಿಂದ 28ರವರೆಗೆ ಉಡುಪಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಭಾಭವನ ಹಾಗೂ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಉಡುಪಿ ಶಾಖೆಯಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಫೆ.24ರಂದು ಬೆಳಗ್ಗೆ 11 ಗಂಟೆಗೆ ಉಡುಪಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಭಾಭವನದಲ್ಲಿ ಬೈಂದೂರು ಮಹಾತ್ಮಾ ಜ್ಯೋತಿಬಾ ಪುಲೆ ಕಲಾ ವೇದಿಕೆಯ ಅಧ್ಯಕ್ಷ ವೈ. ಲಕ್ಷ್ಮಣ್ ಉದ್ಘಾಟಿಸಲಿದ್ದು, ಬೆಂಗಳೂರು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆ ಮಾತಾ ಬಿ ಮಂಜಮ್ಮ ಜೋಗತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಸಮಾರಂಭದಲ್ಲಿ ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರ ಉಡುಪಿ ಇದರ ಸಂಯೋಜಕರಾದ ಪ್ರೊ. ವರದೇಶ್ ಹಿರೇಗಂಗೆ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿಯ ಗೌರವಾಧ್ಯಕ್ಷ ಯು. ವಿಶ್ವನಾಥ್ ಶೆಣೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಶಂಕರ್ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ಎನ್. ನಮ್ರತಾ, ಹಿರಿಯ ಸಹಾಯಕ ಹೆಚ್. ಪ್ರಕಾಶ್ ಉಪಸ್ಥಿತರಿರುವರು.

ಐದು ದಿನಗಳ ಕಾಲ ನಡೆಯುವ ಶಿಬಿರದ ಕೊನೆಯ ದಿನವಾದ ಫೆ.28 ರಂದು ಸಂಜೆ ಉಡುಪಿಯಲ್ಲಿ ಶಿಬಿರಾರ್ಥಿಗಳಿಂದ ಜಾನಪದ ಉತ್ಸವ ನಡೆಯಲಿದೆ. ರಾಜ್ಯದ ವಿವಿಧೆಡೆಗಳಿಂದ ಆಗಮಿಸುವ ಸುಮಾರು 75ಕ್ಕೂ ಹೆಚ್ಚು ಶಿಬಿರಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದು, ನುರಿತ ತರಬೇತುಾರರಿಂದ ತರಬೇತಿ ಪಡೆಯಲಿದ್ದಾರೆ.

ಶಿಬಿರದಲ್ಲಿ ಜಾನಪದ ಕಲಾ ಪ್ರಕಾರಗಳಾದ ಡೊಳ್ಳು ಕುಣಿತ,ಸಿದ್ಧಿ ಡಮಾಮಿ ನೃತ್ಯ, ಮಲ್ಲಕಂಬ, ಕೊರಗರ ಡೋಲು, ಕಂಗಿಲುನೃತ್ಯ ಇನ್ನಿತರ ಕಲಾಪ್ರಕಾರ ಗಳನ್ನು ಕಲಿಸಿಕೊಡಲಾಗುವುದು ಎಂದು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಹಾಗೂ ಕಾರ್ಯಕ್ರಮ ಸಂಚಾಲಕ ರವಿರಾಜ ಹೆಚ್.ಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News