ಮಂಗಳೂರು ಗೋಲಿಬಾರ್ ಬಗ್ಗೆ ಶಾಸಕ ಕಾಮತ್‌ರ ತದ್ವಿರುದ್ಧ ಹೇಳಿಕೆ: ಮಾಜಿ ಮೇಯರ್ ಕೆ.ಅಶ್ರಫ್ ಖಂಡನೆ

Update: 2020-02-21 14:21 GMT

ಮಂಗಳೂರು, ಫೆ.21: ಕಳೆದ ಡಿಸೆಂಬರ್ ನಲ್ಲಿ ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಸಂಪೂರ್ಣ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ. ಸುಳ್ಳಿನ ಸರಮಾಲೆಯನ್ನು ವಿಧಾನಮಂಡಲದಲ್ಲಿ ಪ್ರದರ್ಶಿಸಿ ಅಪವಿತ್ರಗೊಳಿಸಿದ್ದಾರೆ ಎಂದು ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ.ಅಶ್ರಫ್ ತಿಳಿಸಿದ್ದು, ಈ ಬಗ್ಗೆ ಅವರು  ಖಂಡಿಸಿದ್ದಾರೆ.

‘ಮಂಗಳೂರಿನಲ್ಲಿ ಸಿಎಎ ವಿರೋಧಿಸಿ ಜರುಗಿದ ಪ್ರತಿಭಟನೆಯ ಸಂದರ್ಭ ಪೊಲೀಸರು ನಡೆಸಿದ ಪ್ರಚೋದಿತ ಲಾಠಿ ಚಾರ್ಜ್ ಮತ್ತು ಗೋಲಿಬಾರ್‌ನಲ್ಲಿ ಮೃತಪಟ್ಟವರು, ಗಾಯಗೊಂಡವರನ್ನು ಆಪಾದಿತರನ್ನಾಗಿಸಿದ ಘಟನೆಯ ಬಗ್ಗೆ ಹತ್ತಿರದಿಂದ ಗಮನಿಸಿದ್ದೇನೆ. ಸಂಪೂರ್ಣ ಮಾಹಿತಿ ಇದೆ ಎಂದು ವಿಧಾನಸಭೆಯಲ್ಲಿ ಸುಳ್ಳು ಹೇಳಿದ್ದಾರೆ’ ಎಂದು ಅಶ್ರಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸಿಎಎ ವಿರೋಧಿಸಬೇಕು ಮತ್ತು ಗಲಾಟೆ ಎಬ್ಬಿಸಬೇಕು ಎಂಬ ರೀತಿಯಲ್ಲಿನ ಮಾಹಿತಿಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ವಿಧಿಸಲಾಯಿತು. ಅಲ್ಲದೆ, ಸಾವಿರಕ್ಕೂ ಹೆಚ್ಚು ಜನ ಆ ಪ್ರದೇಶದಲ್ಲಿ ಜಮಾವಣೆಗೊಂಡಿದ್ದರು ಎಂದು ಹೇಳುವ ಮೂಲಕ ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ವಿಧಾನಸೌಧದಲ್ಲಿ ಉಲ್ಲೇಖಿಸಿರುವುದು ವಾಸ್ತವಕ್ಕೆ ವಿರುದ್ಧವಾಗಿದೆ’ ಎಂದು ಕೆ.ಅಶ್ರಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News