ಯೋಜನಾಬದ್ಧ ರಾಮಮಂದಿರ ನಿರ್ಮಾಣ: ಪೇಜಾವರ ಶ್ರೀ

Update: 2020-02-21 14:24 GMT

ಮಂಗಳೂರು, ಫೆ.21: ಅಯೋಧ್ಯೆಯಲ್ಲಿ ಈ ಹಿಂದಿನ ನೀಲನಕ್ಷೆ ಪ್ರಕಾರವೇ ಯೋಜನಾಬದ್ಧವಾಗಿ ರಾಮಮಂದಿರ ನಿರ್ಮಿಸಲಾಗುವುದು ಎಂದು ರಾಮಮಂದಿರ ನಿರ್ಮಾಣ ಟ್ರಸ್ಟ್ ಸದಸ್ಯರಾಗಿರುವ ಉಡುಪಿ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಮಂಗಳೂರಿನ ಮಂಜು ಪ್ರಸಾದ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂದಿರ ನಿರ್ಮಾಣಕ್ಕೆ ಬೇಕಾದ ಶಿಲಾ ಕಲ್ಲುಗಳ ಕೆತ್ತನೆ ಕೆಲಸ ಹಲವು ವರ್ಷಗಳ ಹಿಂದೆಯೇ ಪೂರ್ಣಗೊಂಡಿದೆ. ಇವು ಶಿಲೆ ಕಲ್ಲುಗಳಾದ್ದರಿಂದ ಶಿಥಿಲಗೊಳ್ಳುವ ಸಂಭವ ಇಲ್ಲ. ಆದರೂ ಈ ಬಗ್ಗೆ ನಿಗಾ ವಹಿಸಲಾಗುವುದು ಎಂದರು.

ಮಂದಿರ ನಿರ್ಮಾಣ ಸಮಿತಿಯನ್ನೂ ರಚಿಸಲಾಗಿದೆ. ಇದರ ಪ್ರಥಮ ಸಭೆಯೂ ನಡೆದಿದೆ. ಮುಂದಿನ ಸಭೆ ಯಾವಾಗ ಎನ್ನುವುದು ನಿರ್ಧಾರವಾಗಿಲ್ಲ. ಮಂದಿರ ನಿರ್ಮಾಣ ಸಮಿತಿಯಲ್ಲಿ ದಕ್ಷಿಣ ಭಾರತದ ಪ್ರತಿನಿಧಿಯಾಗಿರುವ ನನಗೆ ಎಲ್ಲರ ಸಹಕಾರ ಬೇಕು. ಸಮಿತಿಯಲ್ಲಿ ಗೌರವ ಸ್ಥಾನಕ್ಕಿಂತ ಜವಾಬ್ದಾರಿ ಹೆಚ್ಚಿದೆ. ಮಂದಿರ ನಿರ್ಮಾಣ ಟ್ರಸ್ಟ್‌ಗೆ ಗುರುಗಳಾದ ಶ್ರೀವಿಶ್ವೇಶತೀರ್ಥರ ಸ್ಮರಣಾರ್ಥ ಪ್ರಥಮ ದೇಣಿಗೆ 5 ಲಕ್ಷ ರೂ. ನೀಡಲಾಗಿದೆ ಎಂದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯಲಾಗುವುದು. ಅಯೋಧ್ಯೆಯ ಎಸ್‌ಬಿಐ ಬ್ಯಾಂಕ್‌ನಲ್ಲಿ ಖಾತೆ ತೆರೆದು ಬಳಿಕ ಅದರ ಖಾತೆ ಸಂಖ್ಯೆಯನ್ನು ನೀಡಲಾಗುವುದು. ಆ ಬಳಿಕ ಭಕ್ತರು ಮಂದಿರ ನಿರ್ಮಾಣಕ್ಕೆ ನೇರವಾಗಿ ದೇಣಿಗೆ ಪಾವತಿ ಮಾಡಬಹುದು. ನಾಗರಿಕರ ಸಹಭಾಗಿತ್ವಕ್ಕಾಗಿ ಖಾತೆ ತೆರೆಯುವ ಯೋಜನೆ ಹಾಕಿಕೊಳ್ಳಲಾಗಿದೆ. ಜನತೆ ಶಕ್ತ್ಯಾನುಸಾರ ಮಂದಿರ ನಿರ್ಮಾಣಕ್ಕೆ ನೆರವು ನೀಡಬಹುದು ಎಂದರು.

ಗುರುಗಳಾದ ಶ್ರೀವಿಶ್ವೇಶತೀರ್ಥ ಶ್ರೀ ಹಾದಿಯಲ್ಲಿ ನಾನು ಕೂಡ ಮುನ್ನಡೆಯುತ್ತೇನೆ. ಪೇಜಾವರ ಮಠದ ಅನೇಕ ಶಿಕ್ಷಣ ಸಂಸ್ಥೆಗಳು, ವಸತಿ ಶಾಲೆ ಸೇರಿದಂತೆ ಎಲ್ಲ ಸೊತ್ತುಗಳ ಬಗ್ಗೆ ಸೂಕ್ತ ಗಮನ ಹರಿಸಲಾಗುವುದು. ಇದಕ್ಕಾಗಿ ದೇಶ ಸಂಚಾರ ಕೈಗೊಳ್ಳುತ್ತಿದ್ದು, ಗುರುಗಳ ಅಪೇಕ್ಷೆಯಂತೆ ಸಮಾಜ ಕಾರ್ಯ ಮುಂದುವರಿಯಲಿದೆ ಎಂದು ಪೇಜಾವರ ಮಠಾಧೀಶ ಶ್ರೀವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪೇಜಾವರ ಮಠದ ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಕಲ್ಕೂರ, ಧರ್ಮದರ್ಶಿ ಹರಿಕೃಷ್ಣ ಪುನರೂರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News