ಆಧಾರ್ ಕಾರ್ಡ್ ನೋಂದಣಿ-ತಿದ್ದುಪಡಿ ಶಿಬಿರ

Update: 2020-02-21 14:30 GMT

ಮಂಗಳೂರು, ಫೆ.21: ಭಾರತೀಯ ಅಂಚೆ ಇಲಾಖೆ ಮತ್ತು ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಶಾಖೆಯಿಂದ ಆಧಾರ್ ಕಾರ್ಡ್ ನೋಂದಣಿ ಮತ್ತು ತಿದ್ದುಪಡಿ ಶಿಬಿರವನ್ನು ನಗರದ ಬಂದರ್‌ನಲ್ಲಿರುವ ಹಿದಾಯತ್ ಸೆಂಟರ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಆಧಾರ್ ಕಾರ್ಡ್‌ನ ಬಯೋಮೆಟ್ರಿಕ್ ಪರಿಷ್ಕರಣೆ, ಹೆಸರು, ವಿಳಾಸ ಬದಲಾವಣೆ, ಜನ್ಮದಿನಾಂಕ ತಿದ್ದುಪಡಿ ಸೇರಿದಂತೆ ಹೊಸ ನೋಂದಣಿಗೂ ಅವಕಾಶ ಕಲ್ಪಿಸಿದ್ದರಿಂದ ಸುಮಾರು 400 ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಂಡರು.

ಈ ಹಿಂದೆ ಆಧಾರ್ ಕಾರ್ಡ್ ಮಾಡಲು ಪರದಾಡಿದ್ದ ಸಾರ್ವಜನಿಕರು ಈ ಶಿಬಿರದ ಮೂಲಕ ಜಿಲ್ಲೆಯ ವಿವಿಧೆಡೆಯಿಂದ ಬಂದು ಪ್ರಯೋಜನ ಪಡೆದುಕೊಂಡರು. ನೂರಾರು ಮಂದಿ ತಮ್ಮ ಆಧಾರ್ ಕಾರ್ಡ್‌ನ ಬಗೆಗಿನ ಸಂಶಯ, ಗೊಂದಲಗಳನ್ನು ಅಧಿಕಾರಿಗಳ ಮುಂದೆಯೇ ತಿಳಿಸಿ, ಸರಿಪಡಿಸಿಕೊಂಡರು.

ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅಂಚೆ ಇಲಾಖೆಯ ಆಧಾರ್ ಅಧಿಕಾರಿ ವಿಲ್ಸನ್, 2009ರಲ್ಲಿ ದ.ಕ. ಜಿಲ್ಲೆಯಲ್ಲಿ ಆಧಾರ್ ಕಾರ್ಡ್ ಆರಂಭವಾದಾಗ ಮೊದಲು ನೋಂದಣಿ ಮಾಡಿ, ಪರೀಕ್ಷೆ ಮಾಡಿದ್ದು ನನ್ನದು. ಆ ಬಳಿಕದಿಂದ ಈವರೆಗೆ ಆಧಾರ್‌ನಲ್ಲಿ ದಿನನಿತ್ಯ ಹೊಸ ಹೊಸ ತಾಂತ್ರಿಕ ಬದಲಾವಣೆಗಳಾಗಿದೆ. ಕೆಲವೊಂದು ಸಮಸ್ಯೆಗಳು ಎದುರಾಗುತ್ತಿರುತ್ತವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡುವಂತಹ ಜವಾಬ್ದಾರಿ ಸಮಾಜದ ಎಲ್ಲ ಸಾಮಾಜಿಕ ಸಂಘಟನೆಗಳಿಗಿದೆ. ಈ ಹಿನ್ನೆಲೆಯಲ್ಲಿ ಸಮಾಜ ಸೇವಾ ಘಟಕದ ಸ್ವಯಂ ಸೇವಕರ ಸಹಕಾರದೊಂದಿಗೆ ಶಿಬಿರವು ಯಶಸ್ವಿಯಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಜಮಾಅತೆ ಇಸ್ಲಾಮಿ ಹಿಂದ್‌ನ ಮಂಗಳೂರು ಕಾರ್ಯದರ್ಶಿ ಇಸ್ಹಾಕ್ ಪುತ್ತೂರು ಮಾತನಾಡಿ, ಸಮಾಜ ಸೇವೆ ನಮ್ಮ ಧಾರ್ಮಿಕ ಹೊಣೆಗಾರಿಕೆ ಎಂಬ ನೆಲೆಯಲ್ಲಿ ದೇಶಾದ್ಯಂತ ಸೇವೆಯನ್ನು ನೀಡುತ್ತಾ, ಸಮಾಜದಲ್ಲಿ ಶಾಂತಿ, ಸೌಹಾರ್ದ ನೆಲೆಸಲು ಮುಂದಾಗಿದ್ದೇವೆ. ಸಮಾಜದಲ್ಲಿ ಕಷ್ಟಪಡುತ್ತಿರುವ ಬಡ ಜನರಿಗೆ ಈ ಶಿಬಿರವು ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು.

ಈ ಸಂದರ್ಭ ಸಮಾಜ ಸೇವಾ ಘಟಕದಿಂದ ಅಂಚೆ ಇಲಾಖೆಯ ಸಿಬ್ಬಂದಿಗೆ ಸಹಕರಿಸಿದ ವಿನೋದ್, ಶರತ್, ಪವನ್ ಹಾಗೂ ಸೌಮ್ಯಾ ಅವರಿಗೆ ಕಿರುಕಾಣಿಕೆ ನೀಡಿ, ಗೌರವಿಸಲಾಯಿತು. ಶಿಬಿರದ ಸಂಚಾಲಕ ಹಾಗೂ ಎಚ್‌ಆರ್‌ಎಸ್ ಕ್ಯಾಪ್ಟನ್ ಅಮೀರ್ ಕುದ್ರೋಳಿ, ಸಿದ್ದೀಕ್ ಜಕ್ರಿಬೆಟ್ಟು, ಇರ್ಷಾದ್ ಹಾಶ್ಮಿ, ಆಸಿಫ್ ಕುದ್ರೋಳಿ, ಬಶೀರ್ ದೇರಳಕಟ್ಟೆ, ಆರಿಫ್ ಕಳಾಯಿ, ಮುನವ್ವರ್ ಕುದ್ರೋಳಿ, ಸಲೀಮ್ ಕೆ.ಕೆ., ಇರ್ಷಾದ್ ವೇಣೂರು ಸ್ವಯಂ ಸೇವಕರಾಗಿ ಸಹಕರಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮದಲ್ಲಿ ಮುಹ್ಸಿನ್ ಕಂದಕ್ ಸ್ವಾಗತಿಸಿದರು. ಖಾಸಿಮ್ ಕಂದಕ್ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News