ಅಬ್ಬಕ್ಕ‌ ಆದರ್ಶ ಪಾಲಿಸಿದವರಿಗೆ ಪ್ರಶಸ್ತಿ: ಸಚಿವ ಕೋಟ

Update: 2020-02-21 14:46 GMT

ಮಂಗಳೂರು, ಫೆ.21: ಅಬ್ಬಕ್ಕ ರಾಣಿಯ ಪೌರುಷ ಹಾಗೂ ಆದರ್ಶ ಪಾಲಿಸಿದ ಮಹಿಳಾ ಸಾಧಕರಿಗೆ ಈ ವರ್ಷದ ವೀರನಾರಿ ಅಬ್ಬಕ್ಕ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಬ್ಬಕ್ಕ‌ ಉತ್ಸವ - 2020 ರ ಸಿದ್ಧತೆಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.        ಮುಂದಿನ ವರ್ಷದಿಂದ ಅಬ್ಬಕ್ಕ ಪ್ರಶಸ್ತಿಗೆ ಸಾಧಕರ ಆಯ್ಕೆಗೆ ಮಾನದಂಡಗಳನ್ನು ರಚಿಸಲಾಗುವುದು. ಅಲ್ಲದೇ,‌ ಒಬ್ಬರಿಗೆ ಮಾತ್ರ ಪ್ರಶಸ್ತಿ ನೀಡಲು ಚಿಂತಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಅಬ್ಬಕ್ಕ ಉತ್ಸವ ಉದ್ಘಾಟನೆಗೆ ಖ್ಯಾತ ಮಹಿಳಾ ಸಾಧಕರನ್ನು ಆಹ್ವಾನಿಸುವ ಮೂಲಕ ಅಬ್ಬಕ್ಕಳ ಸಾಧನೆ ಪಸರಿಸುವ ಚಿಂತನೆ ಸರಕಾರಕ್ಕಿದೆ ಎಂದು ಅವರು ಹೇಳಿದರು.

ಈ ವರ್ಷದ ಅಬ್ಬಕ್ಕ‌ ಉತ್ಸವ ಫೆ. 29 ಮತ್ತು ಮಾ. 1 ರಂದು ಅಸೈಗೋಳಿಯಲ್ಲಿ ನಡೆಯಲಿದೆ. ಇದರ ಅಂಗವಾಗಿ  ಕ್ರೀಡೋತ್ಸವ ಫೆ. 23 ರಂದು ನಡೆಯಲಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅಬ್ಬಕ್ಕ ಚರಿತ್ರೆಯ ಹಿನ್ನೆಲೆಯಲ್ಲಿ ವಿವಿಧ ಸ್ಪರ್ಧೆಗಳು ಫೆ. 25 ರಂದು ಏರ್ಪಡಿಸಲಾಗಿದೆ ಎಂದು ಸಚಿವ ಕೋಟ ತಿಳಿಸಿದರು.

ಜಿಲ್ಲಾಡಳಿತ ದ ನೇತೃತ್ವದಲ್ಲಿ ನಡೆಯುವ ಅಬ್ಬಕ್ಕ ಉತ್ಸವ ಕಾರ್ಯಕ್ರಮದ ಯಶಸ್ಸಿಗೆ ಅಬ್ಬಕ್ಕ‌ ಅಭಿಮಾನಿಗಳು, ಸ್ಥಳೀಯರು ಹೆಚ್ಚಿನ‌ ಸಂಖ್ಯೆಯಲ್ಲಿ ಕೈಜೋಡಿಸಿರುವುದು ಶ್ಲಾಘನೀಯ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಬ್ಬಕ್ಕ ಉತ್ಸವ ನಡೆಸಲಾಗುತ್ತದೆ ಎಂದು ಸಚಿವರು ನುಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪಾ, ವಿವಿಧ ಇಲಾಖಾಧಿಕಾರಿಗಳು, ಸಂಘ ಸಂಸ್ಥೆಗಳ‌ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News