ಭಟ್ಕಳ : ಶೈಕ್ಷಣಿಕ, ಉದ್ಯೋಗ ಮೀಸಲಾತಿಗಾಗಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

Update: 2020-02-21 14:56 GMT

ಭಟ್ಕಳ : ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ವರ್ಗದ ಜನರಿಗೆ ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಸಂವಿಧಾನಿಕ ಮೀಸಲಾತಿಯನ್ನು ಮುಂದುವರಿಸಿಕೊಂಡು ಹೋಗುವಂತೆ ಆಗ್ರಹಿಸಿ ಇಲ್ಲಿನ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗದ ಜನರಿಗೆ ಮೀಸಲಾತಿ ಕಲ್ಪಿಸಿಕೊಡುವುದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಂವಿಧಾನಬದ್ಧ ಕರ್ತವ್ಯವಲ್ಲ ಎಂದು ಇತ್ತೀಚೆಗೆ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದೆ. ನ್ಯಾಯಾಲಯದ ಈ ತೀರ್ಪಿಗೆ ಕೇಂದ್ರ ಸರಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಿ ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ವರ್ಗದ ಜನಾಂಗದ ಜನರಿಗೆ ಮೊದಲಿನಂತೆ ಮೀಸಲಾತಿ ಮುಂದುವರಿಸಿ ಹಿತಕಾಪಾಡಬೇಕು ಎಂದು ತಿಳಿಸಲಾಗಿದೆ.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ, ಸುಪ್ರೀಂ ಕೋರ್ಟ ತೀರ್ಪಿನಿಂದ ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ವರ್ಗದವರು ತಮಗಿರುವ ಈಗಿರುವ ಮೀಸಲಾತಿಗೆ ತೊಂದರೆ ಆಗಬಹುದೆಂಬ ಆತಂಕದಲ್ಲಿದ್ದಾರೆ. ಹೀಗಾಗಿ ಕೇಂದ್ರ ಸರಕಾರ ಶೀಘ್ರದಲ್ಲಿ ಸುಪ್ರೀಂ ಕೋರ್ಟಿನ ತೀರ್ಪಿನ ಕುರಿತು ಮರುಪರಿಶೀಲನಾ ಅರ್ಜಿ ದಾಖಲಿಸಬೇಕು ಎಂದು ಆಗ್ರಹಿಸಿದರು.

ಜಿ.ಪಂ. ಅಧ್ಯಕ್ಷೆ ಜಯಶ್ರೀ ಮೊಗೇರ, ಮುಖಂಡರಾದ ರಾಮ ಮೊಗೇರ, ಸೋಮಯ್ಯ ಗೊಂಡ ಮಾತನಾಡಿದರು. ಸಹಾಯಕ ಆಯುಕ್ತರ ಅನುಪಸ್ಥಿತಿಯಲ್ಲಿ ಕಚೇರಿಯ ಅಧಿಕಾರಿ ಎಲ್ ಎ ಭಟ್ಟ ಮನವಿ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯ, ತಾ.ಪಂ. ಅಧ್ಯಕ್ಷ ಈಶ್ವರ ನಾಯ್ಕ, ಉಪಾಧ್ಯಕ್ಷೆ ರಾಧಾ ವೈದ್ಯ, ತಾಪಂ.ಸದಸ್ಯರಾದ ವಿಷ್ಣು ದೇವಾಡಿಗ, ಮಹಾಬಲೇಶ್ವರ ನಾಯ್ಕ, ಮೀನಾಕ್ಷಿ ನಾಯ್ಕ, ಜಯಲಕ್ಷ್ಮೀ ಗೊಂಡ, ಮುಖಂಡರಾದ ಎಪ್‍ಕೆಮೊಗೇರ, ನಾರಾಯಣ ನಾಯ್ಕ, ನಾಗೇಶ ದೇವಾಡಿಗ, ಕೆ ಜೆ ನಾಯ್ಕ, ಸಚಿನ ನಾಯ್ಕ ಮುಂತಾದವರಿದ್ದರು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News