‘ಪಾಕಿಸ್ತಾನ ಝಿಂದಾಬಾದ್’ ಘೋಷಣೆ ಕೂಗುವವರಿಗೆ ಉಗ್ರ ಶಿಕ್ಷೆಯಾಗಲಿ: ಶೋಭಾ ಕರಂದ್ಲಾಜೆ

Update: 2020-02-21 15:19 GMT

ಉಡುಪಿ, ಫೆ.21: ದೇಶದಲ್ಲೀಗ ಭಾರತ ವಿರೋಧಿ ಘೋಷಣೆ ಕೂಗುವ ಜಾಲ ನಿರ್ಮಾಣವಾಗಿದೆ. ದೇಶದಲ್ಲಿ ಜಿನ್ನಾ ಮಾನಸಿಕತೆ ಸೃಷ್ಟಿಸುವ ವ್ಯವಸ್ಥಿತ ಘಡ್ಯಂತ್ರ ನಡೆಯುತ್ತಿದೆ ಎಂದು ಉಡುಪಿ ಮತ್ತು ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತಿದ್ದ ಅವರು, ಅಮೂಲ್ಯ ಬೆಂಗಳೂರಿನಲ್ಲಿ ಗುರುವಾರ ಪಾಕಿಸ್ತಾನ ಝಿಂದಾಬಾದ್’ ಘೋಷಣೆ ಕೂಗಿದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತಿದ್ದರು. ಹಣಕೊಟ್ಟು ಒತ್ತಡ ಹಾಕಿ ಪ್ರಚಾರಕ್ಕಾಗಿ ಹೇಳಿಕೆ ಕೊಡಲಾಗುತ್ತಿದೆ ಎಂದರು.

ಪಾಕಿಸ್ತಾನ ಝಿಂದಾಬಾದ್’ ಘೋಷಣೆ ಕೂಗುವವರಿಗೆ ಉಗ್ರ ಶಿಕ್ಷೆ ಆಗಬೇಕು. ಈ ಸಂಬಂಧ ದೇಶದ ಹಾಗೂ ರಾಜ್ಯದ ಕಾನೂನಿನಲ್ಲಿ ಸೂಕ್ತ ಬದಲಾವಣೆ ಮಾಡಬೇಕು. ಭಾರತದ ಅನ್ನ ತಿಂದು, ಸಬ್ಸಿಡಿ ಪಡೆದು ಪಾಕಿಸ್ತಾನ ಝಿಂದಾಬಾದ್’ ಘೋಷಣೆ ಕೂಗುತ್ತಾರೆ ಎಂದ ಶೋಭಾ, ಇದರ ಹಿಂದೆ ಇರುವ ವ್ಯಕ್ತಿಗಳ ತನಿಖೆಯಾಗಬೇಕು. ಆಯೋಜಕರ ತನಿಖೆಯಾಗೇಕು ಎಂದು ಒತ್ತಾಯಿಸಿದರು.

ಅಮೂಲ್ಯ ತಂದೆ ಬಗ್ಗೆಯೂ ತನಿಖೆ ನಡೆಯಲಿದೆ. ಅಮೂಲ್ಯ ತಂದೆ ಕೊಪ್ಪದವರು. ಹಿಂದೆ ನಕ್ಸಲರ ಜೊತೆ ಅವರಿಗೆ ಸಂಪರ್ಕ ಇತ್ತು. ಈ ಬಗ್ಗೆ ಪೊಲೀಸರಿಗೂ ಮಾಹಿತಿ ಇದೆ. ಅಮೂಲ್ಯ ತಂದೆಗೆ ಸಿರಿಮನೆ ನಾಗರಾಜು ಮತ್ತು ಇತರ ನಕ್ಸಲ್ ಬೆಂಬಲಿಗರ ಒಡನಾಟ ವಿತ್ತು. ಹೀಗಾಗಿ ಅಮೂಲ್ಯ ಅಪ್ಪನಿಗೆ ನಕ್ಸಲರ ಸಂಪರ್ಕ ಇದೆ ಎಂದರು.

ಬೆಂಗಳೂರಿನಲ್ಲಿ ಪಾಕಿಸ್ತಾನ ಝಿಂದಾಬಾದ್’ ಘೋಷಣೆ ಕೂಗಿದ ಹುಡುಗಿ ಯಾರು? ಅವಳ ಹಿನ್ನೆಲೆಯೇನು, ಈಕೆಗೆ ಯಾವ ಸಂಘಟನೆಯ ಜೊತೆ ಸಂಬಂಧ ಇದೆ? ಈ ಬಗ್ಗೆ ತನಿಖೆಯಾಗಬೇಕು. ಎಲ್ಲರನ್ನೂ ದೇಶದ್ರೋಹದ ಕೇಸಿನ ಮೇಲೆ ಜೈಲಿಗೆ ಹಾಕಬೇಕು ಎಂದು ಹೇಳಿದ ಶೋಭಾ, ಯಾವುದೇ ವಕೀಲರು ಇವರ ಕೇಸು ನಡೆಸಬಾರದು ಎಂದರು.

ಹುಬ್ಬಳ್ಳಿ ಪ್ರಕರಣದಲ್ಲಿ ಬೆಂಗಳೂರಿನ ವಕೀಲರು ವಾದ ಮಾಡಲು ಹೋಗಿ ದ್ದಾರೆ. ರಾಷ್ಟ್ರಪ್ರೇಮದ ವಿಚಾರದಲ್ಲಿ ಯಾರು ರಾಜಿ ಆಗಬೇಡಿ. ಚುನಾವಣೆ ಬಂದಾಗ ರಾಜಕೀಯ ಮಾಡೋಣ. ಆದರೆ ಭಾರತಮಾತೆಯ ಬಗ್ಗೆ ಅವಹೇಳನ ಮಾಡಿದವರಿಗೆ ಉಗ್ರ ಶಿಕ್ಷೆಯಾಗಬೇಕು ಎಂದರು.

ಅಮೂಲ್ಯಗೆ ಮಾತನಾಡಲು ಅವಕಾಶ ನೀಡಬೇಕಿತ್ತು ಎಂಬ ಡಿಕೆಶಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸದೆ, ಡಿಕೆಶಿ ಒರಿಜಿನಲ್ ಕಾಂಗ್ರೆಸ್ಸಿಗ ಅಲ್ಲ. ನಿಜವಾದ ಕಾಂಗ್ರೆಸ್ಸಿಗರು ಈ ಹೇಳಿಕೆ ನೀಡುತ್ತಿರಲಿಲ್ಲ. ಸ್ವಾತಂತ್ರ ಹೋರಾಟ ದಲ್ಲಿ ಭಾಗವಹಿಸಿದ ಪಕ್ಷ ಕಾಂಗ್ರೆಸ್ ಅಂತಾರೆ. ಹೀಗಾಗಿ ಹೇಳಿಕೆ ನೀಡಿದ ಡಿಕೆಶಿ ಬಗ್ಗೆಯೂ ತನಿಖೆಯಾಗಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News