×
Ad

ರೈತರ ಬೇಡಿಕೆಗಳ ಈಡೇರಿಕೆಗೆ ಸರಕಾರದ ನೀರಸ ಪ್ರತಿಕ್ರಿಯೆ : ಉಡುಪಿ ಜಿಲ್ಲಾ ಭಾಕಿಸಂ ತೀವ್ರ ಆಕ್ಷೇಪ

Update: 2020-02-21 20:54 IST

ಉಡುಪಿ, ಫೆ.21: ಜಿಲ್ಲೆಯಲ್ಲಿ ರೈತರ ಅನೇಕ ವರ್ಷಗಳ ಬೇಡಿಕೆಗಳಾದ ಕುಮ್ಕಿ, ಗೇರು ಲೀಸ್ ಭೂಮಿಗಳ ಮಂಜೂರಾತಿ, ಕಾಡುಪ್ರಾಣಿಗಳ ಉಪಟಳಕ್ಕೆ ಪರಿಹಾರ, ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆ ಪುನರಾರಂಭ, ವಾರಾಹಿ ನೀರಾವರಿ ಯೋಜನೆಯ ಶೀಘ್ರ ಅನುಷ್ಟಾನ, ಕಸ್ತೂರಿ ರಂಗನ್ ವರದಿ ಅನುಷ್ಟಾನದ ತೊಡಕುಗಳು ಹಾಗೂ ಕಂದಾಯ ಇಲಾಖೆಯ ನಿಷ್ಕೃಿಯತೆಯಿಂದ ಸಂಕಷ್ಟದಲ್ಲಿರುವ ರೈತರ ಬೇಡಿಕೆ ಗಳು ಹಾಗೂ ಮನವಿಗಳಿಗೆ ಜನಪ್ರತಿನಿಧಿಗಳು ಹಾಗೂ ಸರಕಾರದ ಪ್ರತಿಕ್ರಿಯೆ ನಿರಾಶಾದಾಯವಾಗಿದೆ ಎಂದು ಭಾರತೀಯ ಕಿಸಾನ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ಉಡುಪಿಯ ಜಿಲ್ಲಾ ಕಚೇರಿಯಲ್ಲಿ ಗುರುವಾರ ನಡೆದ ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಸಮಿತಿಯ ಸಭೆಯಲ್ಲಿ ಈ ಕುರಿತು ಅಭಿಪ್ರಾಯ ವ್ಯಕ್ತವಾಯಿತು. ಜಿಲ್ಲೆಯಲ್ಲಿ ರೈತರ ಸಮಸ್ಯೆಗಳ ಕುರಿತು ಜಿಲ್ಲೆಯ ಜನಪ್ರತಿನಿಧಿ ಗಳಿಗೆ, ಸಚಿವರಿಗೆ ಹಾಗೂ ಸರಕಾರಕ್ಕೆ ಸಲ್ಲಿಸಿದ ಮನವಿಗಳು ಮೂಲೆ ಗುಂಪಾಗಿವೆ ಎಂದು ಜಿಲ್ಲಾಧ್ಯಕ್ಷ ನವೀನ್‌ಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಸಮಿತಿಯ ಸಭೆಯಲ್ಲಿ ಮಾಹಿತಿ ನೀಡಲಾಯಿತು.

ಜಿಲ್ಲೆಯ ಶಾಸಕರುಗಳನ್ನು ಕೇಳಿದರೆ ಸಚಿವರಿಗೆ ಮನವಿ ನೀಡುವಂತೆ ತಿಳಿಸುತ್ತಾರೆ. ತಿಂಗಳಿಗೊಂದೆರಡು ಬಾರಿ ಜಿಲ್ಲೆಗೆ ಭೇಟಿ ಕೊಡುವ ಉಸ್ತುವಾರಿ ಸಚಿವರನ್ನು ಭೇಟಿ ಮಾಡುವುದೆ ಕಷ್ಟವಾಗಿದ್ದು, ಎರಡು ಬಾರಿ ಸಂಘಟನೆಯ ವತಿಯಿಂದ ಭೇಟಿ ಮಾಡಿ ನೀಡಿದ ಮನವಿಗಳಿಗೆ ಈವರೆಗೆ ಪ್ರತಿಕ್ರಿಯೆ ಇಲ್ಲ. ಅವರಿಗೆ ಇಲ್ಲಿನ ರೈತರ ಸಮಸ್ಯೆಗಳನ್ನು ಮನವರಿಕೆ ಮಾಡುವುದೂ ಕಷ್ಟ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಪ್ತಿ ನುಡಿದರು.

ಸ್ಥಳೀಯರಾದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಈ ಎಲ್ಲಾ ವಿಚಾರಗಳು ಸ್ಪಷ್ಟವಾಗಿ ತಿಳಿದಿದ್ದರೂ, ಅವರು ಈ ಜಿಲ್ಲೆಗೆ ಉಸ್ತುವಾರಿ ಸಚಿವರಲ್ಲ. ರೈತಪರ ಸಂಘಟನೆಯ ಪದಾಧಿಕಾರಿಗಳಿಗೆ ಈ ಪರಿಸ್ಥಿತಿಯಾದರೆ, ಸಾಮಾನ್ಯ ಜನರ ಪರಿಸ್ಥಿತಿ ಏನು? ಕುಮ್ಕಿ ಭೂಮಿಗಳ ಮಂಜೂರಾತಿಗೆ ಹಿಂದೆ ಬಿಜೆಪಿ ಸರಕಾರ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಪ್ರಯತ್ನದಿಂದ ರಚಿಸಿದ ಕಾನೂನು ತಿದ್ದುಪಡಿ ಹಾಗೂ ನಿಯಮಾವಳಿ ಮೂಲೆ ಗುಂಪಾಗಿದೆ. ಅದನ್ನು ಪುನಃ ಕಾರ್ಯರೂಪಕ್ಕೆ ತರಲು ಯಾವ ಶಾಸಕರು, ಸಚಿವರು ಪ್ರಯತ್ನಿಸುತ್ತಿಲ್ಲ ಎಂದು ಅವರು ಆರೋಪಿಸಿದರು.

ಜಿಲ್ಲೆಯಲ್ಲಿ ಅನೇಕ ಪ್ರಭಾವಿ ರೈತರಿಗೆ ಗೇರುಲೀಸ್ ಭೂಮಿಗಳನ್ನು ಜಿಲ್ಲಾಡಳಿತ ಹೆಚ್ಚು ಪ್ರಚಾರ ನೀಡದೇ ಮಂಜೂರಾತಿ ನೀಡುತ್ತಾ ಬಂದಿದ್ದರೂ ಜನಸಾಮಾನ್ಯರಿಗೆ ಮಾತ್ರ ನೀಡಲು ನಿರಾಕರಿಸುತ್ತಿದೆ. ರೈತರ ಅಳಲನ್ನು ಕೇಳಲು ಜಿಲ್ಲೆಯಲ್ಲಿ ಯಾರು ಇಲ್ಲದಂತಹ ಪರಿಸ್ಥಿತಿ ಬಂದಿದೆ. ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನರಾರಂಭಕ್ಕೆ ಉಡುಪಿ ಶಾಸಕರನ್ನು ಹೊರತು ಪಡಿಸಿ ಉಳಿದ ಯಾರೂ ಮಾತನಾಡುತ್ತಿಲ್ಲ. ಕಸ್ತೂರಿರಂಗನ್ ವರದಿ ಜಾರಿಯಾಗಲು ಬಿಡುವುದಿಲ್ಲ ಎಂದು ಶಾಸಕರು ಹೇಳುತಿದ್ದರೂ, ಅದು ಮಾತ್ರ ಹಂತಹಂತವಾಗಿ ಜಾರಿಯಾಗಿ ರೈತ ಮಾತ್ರ ಅಡಕತ್ತರಿಯಲ್ಲಿ ಸಿಕ್ಕಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಯಿತು.

ಸಂಘಟನೆಯ ಮೂಲಕ ಶಾಸಕರಿಗೆ, ಸಂಸದರಿಗೆ ಹಾಗೂ ಸರಕಾರದ ಸಚಿವರಿಗೆ ಕಳುಹಿಸಿದ ಮನವಿಗಳಿಗೆ ಯಾವುದೇ ಉತ್ತರವೂ ಬರುತ್ತಿಲ್ಲ. ಉಡುಪಿ ಜಿಲ್ಲೆಯಲ್ಲಿ ರೈತರ ಬಗ್ಗೆ ಸರಕಾರಕ್ಕೆ ಕಾಳಜಿ ಇಲ್ಲವೆಂಬಂತೆ ಭಾಸವಾಗುತ್ತಿದೆ ಎಂದು ಸಭೆ ಅಭಿಪ್ರಾಯ ಪಟ್ಟಿತು.

ಸಭೆಯಲ್ಲಿ ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾದ ಬಿ.ವಿ.ಪೂಜಾರಿ, ಜಿಲ್ಲಾ ಸಮಿತಿಯ ಪದಾಧಿಕಾರಿಗಳಾದ ಶ್ರೀನಿವಾಸ ಭಟ್, ವಾಸುದೇವ ಶ್ಯಾನುಭಾಗ್, ಸತ್ಯನಾರಾಯಣ ಉಡುಪ ಅಭಿಪ್ರಾಯ ಮಂಡಿಸಿದರು. ಜಿಲ್ಲಾ ಸಮಿತಿಯ ಸದಸ್ಯರಾದ ಪದ್ಮನಾಭ ಶೆಟ್ಟಿ, ಸದಾನಂದ ಶೆಟ್ಟಿ, ಆಸ್ತೀಕ ಶಾಸ್ತ್ರಿ, ಪಾಂಡುರಂಗ ಹೆಗ್ಡೆ, ರಾಮಚಂದ್ರ ಪೈ, ಸುಂದರ ಶೆಟ್ಟಿ, ಕೆ.ಪಿ.ಭಂಡಾರಿ, ಉಮಾನಾಥ ರಾನಡೆ, ಸೀತಾರಾಮ ಗಾಣಿಗ, ಚಂದ್ರಹಾಸ ಶೆಟ್ಟಿ, ಪ್ರಾಣೇಶ್ ಯಡಿಯಾಳ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News