ಶಿವರಾತ್ರಿ ಶೋಭಾಯಾತ್ರೆ: ಸಿಹಿತಿಂಡಿ, ಪಾನೀಯ ವಿತರಿಸಿದ ಕಂದಕ್ ನ ಮುಸ್ಲಿಮರು

Update: 2020-02-21 16:49 GMT

ಮಂಗಳೂರು, ಫೆ.21: ನಗರದ ಕಂದಕ್ ಜಮಾಅತ್ ವತಿಯಿಂದ ಶಿವರಾತ್ರಿ ಪ್ರಯುಕ್ತ ಪ್ರತಿವರ್ಷದಂತೆ ನಡೆಸಿಕೊಂಡು ಬರುವಂತೆ ಈ ವರ್ಷವೂ ಹಿಂದೂಗಳಿಗೆ ಸಿಹಿ ತಿಂಡಿ-ತಿನಿಸು, ತಂಪು ಪಾನೀಯಗಳನ್ನು ವಿತರಿಸುವ ಮೂಲಕ ಮುಸ್ಲಿಮರು ಸೌಹಾರ್ದ ಮೆರೆದ ಘಟನೆ ಕಂದಕ್ ವಾರ್ಡ್‌ನಲ್ಲಿ ಶುಕ್ರವಾರ ರಾತ್ರಿ ನಡೆಯಿತು.

ನಿರಶ್ವಾಲ್ಯ ಪ್ರದೇಶದ ನಿತ್ಯಾನಂದ ಆಶ್ರಮದಿಂದ ಶೋಭಾಯಾತ್ರೆ ತೆರಳುತ್ತಿದ್ದ ಸಂದರ್ಭ ಜಮಾಅತ್‌ನಿಂದ ಹಿಂದೂ ಭಕ್ತರಿಗೆ ಸಿಹಿ ತಿನಿಸು, ತಂಪು ಪಾನೀಯ ವಿತರಿಸಲಾಯಿತು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆಯ (ಕಂದಕ್ ವಾರ್ಡ್) ಸದಸ್ಯ ಅಬ್ದುಲ್ ಲತೀಫ್, ವಾರ್ಡ್‌ನಲ್ಲಿರುವ ಪ್ರತಿಯೊಬ್ಬರು ಅಣ್ಣ-ತಮ್ಮಂದಿರಂತೆ ಬದುಕಿ ಬಾಳಬೇಕು. ಇಲ್ಲಿನ ಸೌಹಾರ್ದದ ವಾತಾವರಣವು ದೇಶ, ರಾಜ್ಯ, ಜಿಲ್ಲೆ, ತಾಲೂಕು, ನಗರ, ಗಲ್ಲಿಗಲ್ಲಿಗಳಲ್ಲೂ ನಿರ್ಮಾಣವಾಗಬೇಕು. ಸಹೋದರತೆ ಭಾವದಿಂದ ಶಾಂತಿಯಿಂದ ಜೀವನ ನಡೆಸಬೇಕು ಎಂದು ಹೇಳಿದರು.

ಪ್ರತಿ ಮೀಲಾದುನ್ನಬಿ ದಿನದಂದು ನಿತ್ಯಾನಂದ ಆಶ್ರಮ ಸಮಿತಿಯಿಂದ ಸಿಹಿ ತಿನಿಸು- ತಂಪು ಪಾನೀಯ ವಿತರಿಸುತ್ತಾರೆ. ಅದಕ್ಕೆ ಪ್ರತಿಯಾಗಿ ಮುಸ್ಲಿಂ ಜಮಾಅತ್‌ನಿಂದ ಶಿವರಾತ್ರಿ ದಿನದಂದು ಭಕ್ತರ ದಣಿವು ನಿವಾರಿಸುತ್ತೇವೆ. ಇಲ್ಲಿನ ಸೌಹಾರ್ದವು ಎಲ್ಲರಿಗೂ ಮಾದರಿಯಾಗಲಿ ಎಂದು ತಿಳಿಸಿದರು.

ಈ ಸಂದರ್ಭ ಕಂದಕ್ ಜಮಾಅತ್‌ನ ಸಿದ್ದೀಕ್, ಫೈಝಲ್, ಹಕೀಂ, ಅಶ್ರಫ್, ಮುಸ್ತಫಾ, ಶಕೀಬ್, ಹಮೀದ್, ಹಸನ್, ಮುಕ್ತಾರ್, ಶರೀಫ್, ಅಹ್ಮದ್ ಬಾವ, ಅರ್ಫಾಝ್, ಸಫ್ವಾನ್, ಸಮೀರ್ ಅವರೊಂದಿಗೆ ನಿತ್ಯಾನಂದ ಆಶ್ರಮದ ಹನುಮಂತ ಕಾಮತ್, ರೋಹಿತ್, ಸದಾಶಿವ ಶೆಟ್ಟಿ, ಪ್ರಮೋದ್, ಸಂತೋಷ, ಕಮಲಾಕ್ಷ, ಅರುಣ್, ನಿತೀಶ್ ಮತ್ತಿತರರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News